ಎನ್‌ಎಫ್‌ಐಆರ್‌ಟಿಡಬ್ಲ್ಯು 18ನೇ ರಾಷ್ಟ್ರೀಯ ಸಮ್ಮೇಳನ : ಕೇಂದ್ರದ ಖಾಸಗೀಕರಣ ನೀತಿಗೆ ವಿರೋಧ

ಬೆಂಗಳೂರು :

    ಸಾರಿಗೆ ನೌಕರರ ರಾಷ್ಟ್ರೀಯ ಸಂಘಟನೆಯು 1956ರಲ್ಲಿ ಎಐಟಿಯುಸಿ ಲಾಂಛನದಡಿ ಆರಂಭವಾಯಿತು. ಈ ಸಂಘಟನೆಯು 68 ವರ್ಷಗಳ ಸುದೀರ್ಘ ಪಯಣದಲ್ಲಿ ಹಲವಾರು ರಾಷ್ಟ್ರೀಯ ಹೋರಾಟಗಳನ್ನು ನಡೆಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಆರೋಗ್ಯಕರ ಪ್ರಭಾವ ಬೀರಿ ಸಾರಿಗೆ ನಿಗಮಗಳ ಚಳುವಳಿಗಳಿಗೆ ಮಾರ್ಗದರ್ಶನ ನೀಡಿದೆ. ಇಂದು ಈ ಸಂಘಟನೆಯ ಅಡಿಯಲ್ಲಿ 17 ರಾಜ್ಯಗಳಲ್ಲಿರುವ ಸುಮಾರು 40 ಕಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ.

    ಈ ರಾಷ್ಟ್ರೀಯ ಸಂಘಟನೆಯಲ್ಲಿ ಸಾರಿಗೆ ನಿಗಮಗಳ ಸಂಘಗಳೊಂದಿಗೆ ಹಲವಾರು ಕಡೆ ಖಾಸಗಿ ಕ್ಷೇತ್ರದ ಸಾರಿಗೆ ವಲಯದ ನೌಕರರ ಸಂಘಗಳೂ ಸೇರಿವೆ. 2014ರಲ್ಲಿ ಮೋದಿಯವರ ಸರ್ಕಾರ ತಂದಿದ್ದ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ 2014ರ (2015) ವಿರುದ್ಧ ದೇಶಾದ್ಯಂತ ಯಶಸ್ವಿ ಹೋರಾಟ ನಡೆಸಿತು. ಸಾರಿಗೆ ನಿಗಮಗಳ ಬೆಳವಣಿಗೆಗೆ ಹಾಗೂ ಅಲ್ಲಿ ಕೆಲಸ ಮಾಡುವ ಹಲವಾರು ಲಕ್ಷ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಮತ್ತು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ರಾಷ್ಟ್ರೀಯ ಸಂಘಟನೆ ನಿರಂತರವಾದ ಚಳುವಳಿಯನ್ನು ನಡೆಸುತ್ತ ಬಂದಿದೆ.

   1996ರಿಂದ ನಮ್ಮ ರಾಜ್ಯದಲ್ಲಿ ಬಂದಿರುವ ಎಲ್ಲ ಸರ್ಕಾರಗಳೂ ಕೆಎಸ್‌ಆರ್‌ಟಿಸಿ ನೌಕರರ ಟ್ರೇಡ್ ಯೂನಿಯನ್ ಚಳುವಳಿಯನ್ನು ಸದೆಬಡಿಯುವ ನೀತಿಯನ್ನು ಜಾರಿಗೆ ತಂದಿವೆ. ದ್ವಿಪಕ್ಷೀಯ ವೇತನ ಒಪ್ಪಂದಗಳನ್ನು ಮಾಡುವುದನ್ನು ನಿಲ್ಲಿಸಿ ಏಕಪಕ್ಷೀಯವಾಗಿ ಅಲ್ಪಸ್ವಲ್ಪ ವೇತನ ಏರಿಕೆ ಮಾಡುವ ವಿಧಾನವನ್ನು 1996ರಿಂದ ಸಾರಿಗೆ ನಿಗಮಗಳು ಅನುಸರಿಸಿವೆ.

   ನಮ್ಮ ಕಾರ್ಮಿಕ ಸಂಘಟನೆಯ ಹಕ್ಕನ್ನು ತುಳಿದು, ಕಾರ್ಯಕರ್ತರ ವಿರುದ್ಧ ಸುಮಾರು 300 ಪೊಲೀಸ್ ಮೊಕದ್ದಮೆಗಳನ್ನು ಹೂಡಿ ಅವರನ್ನು ಚೆಲ್ಲಾಪಿಲ್ಲಿ ವರ್ಗಾವಣೆ ಮಾಡಲಾಯಿತು. ಹಲವಾರು ಕಾರ್ಯಕರ್ತರು ಕೆಲಸದಿಂದ ವಜಾ ಆದರು. ಈ ಸಂದರ್ಭದಲ್ಲಿ ಎನ್‌ಎಫ್‌ಐಆರ್‌ಟಿಡಬ್ಲ್ಯು ದೇಶಾದ್ಯಂತ ಸಹಸ್ರಾರು ಸಾರಿಗೆ ನೌಕರರನ್ನು ಬೆಂಗಳೂರಿನಲ್ಲಿ ಒಂದುಗೂಡಿಸಿ. ಧರಣಿ ಸತ್ಯಾಗ್ರಹ ನಡೆಸಿತು.

   ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿ, ರಾಜಸ್ತಾನ, ಗುಜರಾತ್, ಉತ್ತರ ಪ್ರದೇಶ, ಬಿಹಾರ್, ಗೋವಾ, ಕೇರಳ, ತಮಿಳುನಾಡು ಮತ್ತು ಅಂಧ್ರ ಪ್ರದೇಶಗಳಿಂದ ಸಹಸ್ರಾರು ಸಂಖ್ಯೆಗಳಲ್ಲಿ ಇಲ್ಲಿಗೆ ಬಂದಿದ್ದ ಎನ್‌ಎಫ್‌ಐಆರ್‌ಟಿಡಬ್ಲ್ಯು ಸದಸ್ಯರು ರಾಜ್ಯ ಸರ್ಕಾರದ ಕಾರ್ಮಿಕ-ವಿರೋಧಿ ನೀತಿಯನ್ನು ಖಂಡಿಸಿ ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟರು. ಇಂತಹ ಪ್ರದರ್ಶನಗಳು ನಮ್ಮ ಸಂಘಟನೆಯನ್ನು ಗಟ್ಟಿ ಮಾಡಿ ನಮ್ಮ ಹೋರಾಟಕ್ಕೆ ಸ್ಪೂರ್ತಿ ನೀಡುವುದರ ಜೊತೆಗೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟವು. ನಾವು ಇಂತಹ ಬೆಂಬಲಕ್ಕಾಗಿ ಎನ್‌ಎಫ್‌ಐಆರ್‌ಟಿಡಬ್ಲ್ಯು ನಾಯಕತ್ವಕ್ಕೂ ಅದಕ್ಕೆ ಸೇರಿರುವ ಸಂಘಟನೆಗಳಿಗೂ ತುಂಬುಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

   ಇಂದು ನಾವು ರಾಷ್ಟ್ರೀಯ ಸಮ್ಮೇಳನವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಹಲವಾರು ರಾಜ್ಯ ಸರ್ಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿರುವ ಸಾರಿಗೆ ನಿಗಮಗಳನ್ನು ಮುಚ್ಚಿ ಖಾಸಗೀಕರಣಕ್ಕೆ ನಿಂತಿವೆ. ಕ್ರಮೇಣ ದೇಶಾದ್ಯಂತ ಸಾರಿಗೆ ನಿಗಮಗಳ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾರ್ವಜನಿಕರಿಗೆ ಕೈಗೆಟಕುವ ಪ್ರಯಾಣದರದಲ್ಲಿ ಸಾರಿಗೆ ಸೌಕರ್ಯವನ್ನು ಸುರಕ್ಷಿತವಾಗಿ ಮತ್ತು ದಕ್ಷತೆಯಿಂದ ಒದಗಿಸುವ ಉದ್ದೇಶದಿಂದ ಆರ್‌ಟಿಸಿ ಕಾಯ್ದೆ, 1950ರ ಪ್ರಕಾರ ಸಾರಿಗೆ ನಿಗಮಗಳು ಹುಟ್ಟಿಕೊಂಡಿವೆ.

   ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನೂ ಈ ನಿಗಮಗಳು ಹೊತ್ತುಕೊಂಡಿವೆ. ಅಲ್ಲದೇ ಈ ನಿಗಮಗಳು ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಕೊಟ್ಟಿವೆ. ಈ ನಿಗಮಗಳಲ್ಲಿ ಹಲವಾರು ನಕಾರಾತ್ಮಕ ಪ್ರವೃತ್ತಿಗಳು ಬೆಳೆಯುತ್ತಿವೆ. ಖಾಸಗಿಯವರಿಂದ ಬಾಡಿಗೆಗೆ ಇ-ಬಸ್ಸನ್ನು ಪಡೆದು ಖಾಸಗಿ ಚಾಲಕರನ್ನು ಇಟ್ಟುಕೊಂಡು ಕ್ರಮೇಣ ನಿಗಮಗಳಲ್ಲಿ ಖಾಯಂ ಸಿಬ್ಬಂದಿಗಳ ಹುದ್ದೆಯನ್ನು ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಈ ಸಾರಿಗೆ ನಿಗಮಗಳಲ್ಲಿ ದೇಶಾದ್ಯಂತ ಹಲವಾರು ಸಮಸ್ಯೆಗಳನ್ನು ಸಿಬ್ಬಂದಿಗಳು ಎದುರಿಸುತ್ತಿದ್ದಾರೆ. ಈ ಸಮ್ಮೇಳನದ ಪ್ರತಿನಿಧಿಗಳ ಅಧಿವೇಶನದಲ್ಲಿ ಈ ಎಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ರಾಷ್ಟ್ರವ್ಯಾಪಿ ಚಳುವಳಿಗಳಿಗೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.

    ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎನ್‌ಎಫ್‌ಐಆರ್‌ಟಿಡಬ್ಲ್ಯು ಅಧ್ಯಕ್ಷ ಹೆಚ್.ವಿ. ಆನಂತಸುಬ್ಬರಾವ್, ಜಂಟಿ ಕಾರ್ಯದರ್ಶಿ ಬಿ.ಎಸ್. ರಜನೀಕಾಂತ್ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕರು ಅಧಿವೇಶನದಲ್ಲಿ ಭಾಗಿಯಾಗಿದ್ದರು

 

Recent Articles

spot_img

Related Stories

Share via
Copy link
Powered by Social Snap