ಅಗರ್ತಲಾ
ತ್ರಿಪುರಾದಲ್ಲಿನ ಸುಮಾರು 400 ಉಗ್ರರು ಸೆಪಹಿಜಾಲಾ ಜಿಲ್ಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಉಗ್ರಗಾಮಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್‌ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ಗೆ ಸೇರಿದವರಾಗಿದ್ದಾರೆ.
ಸೆಪ್ಟೆಂಬರ್ 4 ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಉಗ್ರರು ಶರಣಾಗುತ್ತಿದ್ದಾರೆ.
ಎನ್‌ಎಲ್‌ಎಫ್‌ಟಿ ಮತ್ತು ಎಟಿಟಿಎಫ್‌ನ ಸುಮಾರು 400 ಉಗ್ರಗಾಮಿಗಳು ಜಂಪೂಯಿಜಾಲಾದಲ್ಲಿರುವ ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ನ 7 ನೇ ಬೆಟಾಲಿಯನ್‌ನ ಪ್ರಧಾನ ಕಛೇರಿಯಲ್ಲಿ ಸಿಎಂ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎರಡು ನಿಷೇಧಿತ ಸಂಘಟನೆಯ ಎಲ್ಲಾ ನಾಯಕರು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಲು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಸಂಘಟನೆಗಳು 1990 ರ ದಶಕದ ಉತ್ತರಾರ್ಧದಿಂದ ಸುಮಾರು ಎರಡು ದಶಕಗಳ ಕಾಲ ರಾಜ್ಯದಲ್ಲಿ ಅಪಾರ ವಿನಾಶವನ್ನುಂಟುಮಾಡಿದವು. ದಂಗೆಯಿಂದಾಗಿ ಸಾವಿರಾರು ಜನರು ವಿಶೇಷವಾಗಿ ಆದಿವಾಸಿಗಳಲ್ಲದವರು ಸ್ಥಳಾಂತರಗೊಂಡರು. ಎರಡು ಸಂಘಟನೆಗಳ ಉಗ್ರಗಾಮಿಗಳ ಪುನರ್ವಸತಿಗಾಗಿ ಕೇಂದ್ರವು 250 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.