ಮಂಗಳೂರು
ತುಳುನಾಡಿನ ಜನರು ದೈವಗಳನ್ನು ತುಂಬಾ ಹೆಚ್ಚು ನಂಬುತ್ತಾರೆ. ಅಲ್ಲದೆ ದೈವಗಳು (Daiva) ನಂಬಿದವರ ಕೈ ಬಿಡುವುದಿಲ್ಲ ಎಂಬ ಜನರ ನಂಬಿಕೆಗೆ ಇಂಬು ಕೊಡುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇವೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಗುಳಿಗ ದೈವದ ಕಾರ್ಣಿಕ ನಡೆದಿದೆ.
ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗ ಕಟ್ಟಡ ನಿರ್ಮಾಣಕ್ಕೆಂದು ಇಲ್ಲಿದ್ದ ಹಲವು ಮರಗಳನ್ನು ಕಡಿಯಲಾಗಿತ್ತು. ಈ ವೇಳೆ ಅಲ್ಲಿದ್ದ ಗುಳಿಗ ದೈವದ ಸಾನಿಧ್ಯವಿದ್ದ ಬೃಹದಾಕಾರದ ಅಶ್ವಥ ಮರವನ್ನೂ ಕಡಿಯಲು ಗುತ್ತಿಗೆದಾರರು ಮುಂದಾಗಿದ್ದರು. ಆದರೆ ಅನೇಕ ಭಕ್ತರು ಹಾಗೂ ಪರಿಸರ ಹೋರಾಟಗಾರರು ಹೋರಾಟ ಮಾಡಿ ಮರವನ್ನು ಬೇರೆಡೆ ಸ್ಥಳಾಂತರ ಮಾಡಿದ್ದರು.
ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು (ದೈವದ ಕಟ್ಟೆ) ತೆರವು ಮಾಡಲಾಯಿತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು, ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಲವು ಅವಘಡಗಳು, ಸಮಸ್ಯೆಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಒ.ಟಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಸಿಬ್ಬಂದಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಸದ್ಯ ಇದೀಗ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆ ಆಗಿದೆ. ಆದ್ರೆ, ಆಸ್ಪತ್ರೆಯಲ್ಲಿ ಇನ್ನೂ ಕೂಡ ಸಮಸ್ಯೆಗಳು ಮುಂದುವರೆದಿವೆ. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ಪ್ರಶ್ನಾಚಿಂತನೆಯ ಮೊರೆ ಹೋಗಿದ್ದು ಈ ವೇಳೆ ಇಲ್ಲಿ ಗುಳಿಗ ದೈವದ ನೆಲೆಯನ್ನು ಕಿತ್ತು ಹಾಕಿದ್ದು ದೈವ ಅತಂತ್ರವಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಅಕಾಲಿಕ ಸಾವು ನೋವಿನ ಬಳಿಕ ಸರ್ಕಾರಿ ವೈದ್ಯಾಧಿಕಾರಿ, ಅಧಿಕಾರಿ ಸಿಬ್ಬಂದಿ ಪ್ರಶ್ನಾಚಿಂತನೆಯ ಮೊರೆ ಹೋಗಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನಿಧ್ಯವಿದ್ದು ಗುಳಿಗ ದೈವ ಕೋಪಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈಗ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳೇ ಹಣ ಸಂಗ್ರಹಿಸಿ ಗುಳಿಗ ದೈವದ ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ಥಳಾಂತರ ಮಾಡಿದ್ದ ಅಶ್ವಥ ಮರದ ಬುಡದಲ್ಲೇ ಗುಳಿಗ ದೈವಕ್ಕೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಪ್ರಾಯಶ್ಚಿತ ಸಹಿತ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಲಾಗಿದೆ.
ಇನ್ನು ಕಟ್ಟಡ ನಿರ್ಮಾಣವಾಗಿ ಒಂದು ವರ್ಷವಾದರೂ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಆಗಿರಲಿಲ್ಲ. ಆದ್ರೆ ದೈವದ ಪ್ರತಿಷ್ಠೆ ಕಾರ್ಯದ ಬಳಿಕ 15 ದಿನದಲ್ಲೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದೆ. ಐಸಿಯುಗೆ ಬರುವ ರೋಗಿಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಗುಳಿಗ ದೈವದ ಕಾರಣಿಕಕ್ಕೆ ಸರ್ಕಾರಿ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ತಲೆಬಾಗಿದೆ.
ಹಲವು ವರ್ಷಗಳ ಹಿಂದೆ ಹಂಪನಕಟ್ಟೆ ಪರಿಸರದಲ್ಲಿ ಕುಟುಂಬವೊಂದು ವಾಸಿಸುತ್ತಿತ್ತು. ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಈ ಕುಟುಂಬ ನೆಲೆಸಿತ್ತು. ಕೆಲ ವರ್ಷಗಳ ಹಿಂದೆ ಈ ಕುಟುಂಬ ಮಂಗಳೂರಿನ ವಾಮಂಜೂರು ಪರಿಸರಕ್ಕೆ ಸ್ಥಳಾಂತರವಾಗಿತ್ತು. ಮನೆ ಸ್ಥಳಾಂತರದ ಸಂದರ್ಭ ದೈವಗಳನ್ನು ತನ್ನೊಂದಿಗೆ ಕರೆದೊಯ್ದಿದ್ದರು. ಈ ಕುಟುಂಬ ಗುಳಿಗ ಸಹಿತ ಐದು ದೈವಗಳನ್ನು ಆರಾಧನೆ ಮಾಡುತ್ತಿದ್ದರು. ಕರಾವಳಿಯಲ್ಲಿ ಸ್ಥಳಕ್ಕೆ ಸಂಬಂಧಿಸಿದ ಗುಳಿಗ ಬೇರೆ ಕಡೆಗೆ ಹೋಗುವುದಿಲ್ಲ ಎಂಬ ನಂಬಿಕೆ ಇದೆ.
ನನ್ನ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿದಕ್ಕೆ ಗುಳಿಗ ದೈವ ಕೋಪಗೊಂಡಿತ್ತು. ಸದ್ಯ ಪವಾಡ ಎಂಬಂತೆ ಸ್ಥಳಾಂತರ ಮಾಡಿದ್ದ ಅಶ್ವಥ ಮರಕ್ಕೆ ಕೆಲವೇ ದಿನಗಳಲ್ಲಿ ಮತ್ತೆ ಜೀವ ಕಳೆ ಬಂದಿದೆ. ಅನೇಕ ಪವಾಡಗಳಿಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಸಾಕ್ಷಿಯಾಗಿದೆ. ಸದ್ಯ ಗುಳಿಗ ದೈವದ ಪುನರ್ ಪ್ರತಿಷ್ಠೆ ಬಳಿಕ ಆಸ್ಪತ್ರೆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿದೆ. ಅಶ್ವಥ ಮರದ ಕಟ್ಟೆಯ ಸುತ್ತ ಅಪವಿತ್ರವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಿಂಗಳಿಗೊಮ್ಮೆ ಗುಳಿಗ ದೈವಕ್ಕೆ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ.