ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಈ ತಿಂಗಳ ಅಂತ್ಯದೊಳಗೆ ಐರಾವತ್ ಕ್ಲಬ್ ಕ್ಲಾಸ್ 2.0 ಮಾದರಿಯ 20 ಹೊಸ ಐಷಾರಾಮಿ ಬಸ್‌ಗಳನ್ನು ಪ್ರತಿ ಬಸ್ ಗೆ 1.78 ಕೋಟಿ ರೂಪಾಯಿ ನೀಡಿ ಖರೀದಿಸುತ್ತಿದೆ. ಪ್ರಸ್ತುತ ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು 443 ಐಷಾರಾಮಿ ಬಸ್‌ಗಳಿವೆ.
ಅಧಿಕಾರಿಗಳ ಪ್ರಕಾರ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌ಆರ್ ಶ್ರೀನಿವಾಸ್(ವಾಸು) ಅವರೊಂದಿಗೆ ಹೊಸ ಬಸ್‌ಗಳನ್ನು ಪರಿಶೀಲಿಸಲು ಹೊಸಕೋಟೆ ಬಳಿಯ ವೋಲ್ವೋ ಬಸ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದರು.
ಈ ಬಸ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ, ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳು (DRL) ಹೊಸ ಪ್ಲಶ್ ಇಂಟೀರಿಯರ್‌ಗಳು ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿವೆ. ಈ ಬಸ್ ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಂತ್ರಜ್ಙಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹೊಸ ಬಸ್ ಒಟ್ಟಾರೆ ಉದ್ದದಲ್ಲಿ ಶೇಕಡಾ 3.5 ಹೆಚ್ಚಿರುವುದರಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತದೆ. ವಿಂಡ್‌ಶೀಲ್ಡ್ ಗಾಜು 9.5% ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.