ವಾಡಿ
ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ನಾಗಾವಿ ನಾಡು ಚಿತ್ತಾಪುರದ ದರ್ಗಾವೋಂದರ ಮೇಲೆ ಧರ್ಮಾಂಧರು ದಾಳಿ ನಡೆಸಿ ವಿಕೃತಿ ಮೆರೆದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಚಿತ್ತಾಪುರ ಮಾರ್ಗದ ಕರದಹಳ್ಳಿ ಸೀಮೆಯಲ್ಲಿರುವ ಸೈಯದ್ ಪೀರ್ ದರ್ಗಾ ಕಿಡಿಗೆಡಿಗಳ ದುಷ್ಕೃತ್ಯಕ್ಕೆ ಬಲಿಯಾಗಿ ಧ್ವಂಸಗೊಂಡಿದೆ. ಮಧ್ಯರಾತ್ರಿ ದರ್ಗಾಕ್ಕೆ ಪ್ರವೇಶ ನೀಡಿದ ಕಿಡಿಗೇಡಿಗಳು ಸೈಯದ್ ಪೀರ್ ದರ್ಗಾಕ್ಕೆ ಸುತ್ತಲೂ ನಿರ್ಮಿಸಲಾದ
ತಡೆಗೋಡೆಯನ್ನು ಒಡೆದು ಹಾಕಿದ್ದಾರೆ. ನಂತರ, ದರ್ಗಾದ ಮೇಲೆ ನಿರ್ಮಿಸಲಾದ ಗೋಪುರವನ್ನು ಉರುಳಿಸಿದ್ದಾರೆ. ಘಟನೆಯಿಂದ ದರ್ಗಾ ಕಟ್ಟಡದ ಗೋಡೆ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ದುಷ್ಕರ್ಮಿಗಳು ಯಾವ ಕಾರಣಕ್ಕೆ ಈ ನಿರ್ಜನ ಪ್ರದೇಶದ ದರ್ಗಾದ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ. ಅಲ್ಲದೆ, ದರ್ಗವನ್ನೇ ಗುರಿಯಾಗಿಟ್ಟುಕೊಂಡು ಧ್ವಂಸಕೃತ್ಯಕ್ಕೆ ಕೈ ಹಾಕಿರುವ ಕಿಡಿಗೇಡಿಗಳು ಯಾರು ಮತ್ತು ಅವರ ಉದ್ದೇಶವೇನು ಎಂಬುವುದನ್ನು ಪತ್ತೆ ಹಚ್ಚಬೇಕಿದೆ. ಸ್ಥಳಕ್ಕೆ ಭೇಟಿ ನೀಡಿದ ಚಿತ್ತಾಪುರ ಠಾಣೆಯ ಪಿಎಸ್ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯಕ್ಕೆ ಎಸೆಗಿರುವ ಕಿಡಿಗೇಡಿಗಳನ್ನು ಬಂಧಿಸಲು ಜಾಲಬಿಸಿದ್ದಾರೆ.
ದರ್ಗಾ ಸಾಹೇಬ್ ಆಕ್ರೋಶ: ಘಟನೆಯಿಂದ ಮನನೊಂದಿರುವ ಸೈಯದ್ ಪೀರ್ ದರ್ಗಾದ ಸಾಹೇಬ ಸೈಯದ್ ಅಲಿ ಅವರು ದುಷ್ಕೃತ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವೇಷದ ಭಾವನೆಯಿಂದ ನಡೆಸಲಾದ ಈ ದಾಳಿಯನ್ನು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿತ್ತಾಪುರ ಠಾಣೆಗೆ ದೂರು ನೀಡುವ ಮೂಲಕ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ರೊಚ್ಚಿಗೆದ್ದ ದರ್ಗಾದ ಭಕ್ತರು ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.