ಬೆಂಗಳೂರು:
ಕರ್ನಾಟಕ ಬಿಜೆಪಿ ಅವರಿಗೆ ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪವಾದರೂ ಮಾಹಿತಿ ಸಂಗ್ರಹಿಸಿ ಟ್ಟೀಟ್ ಮಾಡಲು ಯಾರಾದರೂ ಪ್ರಜ್ಞಾವಂತರು ಸಲಹೆ ನೀಡಿದರೆ ಒಳ್ಳೆಯದು ಅನ್ನಿಸುತ್ತೆ. ಇಲ್ಲವೆಂದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳುವ ಹಠಕ್ಕೆ ಬಿದ್ದ ಆಗಿದೆ ಅವರ ಪರಿಸ್ಥಿತಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪ್ರತಿ ಬಾರಿಯೂ ಅವರಿಗೆ ತಿಳುವಳಿಕೆ ನೀಡಿ ತಮ್ಮ ಬಿ.ಜೆ.ಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಳ್ಳಿದ ಪ್ರತಿಯೊಂದು ಅಂಶವನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾಗ್ಯೂ ಸ್ವಲ್ಪ ಕೂಡ ಅರಿವಿಲ್ಲದೆ ಟ್ಟೀಟ್ ಮಾಡಿ ತಮ್ಮ ಮಾರ್ಯಾದೆಯನ್ನು ಈ ರೀತಿ ಹರಾಜು ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಸಹಾನುಭೂತಿ ಇದೆ.
ಬಿ.ಜೆ.ಪಿ ಅವಧಿಯಿಂದ ಅಂದರೆ 2009 ರಿಂದ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ನೀಡಲಾಗುತ್ತಿದ್ದ ರೂ.30 ಅನ್ನು ಕಾಂಗ್ರೆಸ್ ಸರ್ಕಾರ 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ ಮಾಡಿತು. ಮರುವರ್ಷದಲ್ಲಿಯೇ ನಮ್ಮ ಸರ್ಕಾರ 2017 ರಲ್ಲಿ ರೂ. 50 ಅನ್ನು ರೂ.100 ಕ್ಕೆ ಏರಿಕೆ ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಬಸ್ಸಿಗೆ ನೀಡುವ ಮೊತ್ತದಲ್ಲಿ ರೂ.100 ಯಾವುದೇ ಎಳ್ಳಷ್ಟೂ ಬದಲಾವಣೆ ಮಾಡದೇ ಇದ್ದದ್ದು ಬಿ.ಜೆ.ಪಿ ಸರ್ಕಾರದ ಕೀರ್ತಿಪತಾಕೆ ಮತ್ತಷ್ಟು ಹಾರುವಂತೆ ಮಾಡಿದೆ. 2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಳ ಕೂಡ ನಮ್ಮ ಸರ್ಕಾರದ ಕಾಲದಲ್ಲಿಯೇ ಅಗುತ್ತಿದೆ. ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.