ಮುಂಬೈ:
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಮತ್ತೆ ಜೀವ ಬೆದರಿಕೆ ಬಂದಿದ್ದು, ನಟ ಜೀವಂತವಾಗಿರಬೇಕಾದರೆ 5 ಕೋಟಿ ಹಣ ನೀಡಿ, ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆರೋಪಿಯೊಬ್ಬ ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆಂದು ತಿಳಿದುಬಂದಿದೆ.ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, 5 ಕೋಟಿ ರೂ. ನೀಡಬೇಕು, ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಪರಿಸ್ಥಿತಿ ಬಾಬಾ ಸಿದ್ದಿಕಿಗಿಂತಲೂ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ವಿರುದ್ಧ ಭಯೋತ್ಪಾದನೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಅಧಿಕಾರಿಗಳಿಗೆ ಆತ ಬೇಕಾಗಿದ್ದ. ರೈತನ ಮಗನಾದ ಲಾರೆನ್ಸ್ 2010 ರಲ್ಲಿ ಸಂಘಟಿತ ಅಪರಾಧಕ್ಕೆ ಕಾಲಿಟ್ಟಾಗ ಇನ್ನೂ ಹದಿಹರೆಯದವನಾಗಿದ್ದನು. ಪೊಲೀಸ್ ದಾಖಲೆಯ ಪ್ರಕಾರ ವಿದ್ಯಾರ್ಥಿ ರಾಜಕೀಯದಲ್ಲಿ ತೊಡಗಿಸಿಕೊಂಡಾಗ ಪ್ರತಿಸ್ಪರ್ಧಿಗಳನ್ನು ಬೆದರಿಸುವುದು ಸೇರಿದಂತೆ ಹಲವು ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡತೊಡಗಿದ. ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಯತ್ನದ ಎರಡು ಪ್ರಕರಣಗಳು, ಮಾದಕವಸ್ತು ಕಳ್ಳಸಾಗಣೆ ಮತ್ತು ಬಂದೂಕುಗಳನ್ನು ಸಾಗಿಸುವುದು ಸೇರಿದಂತೆ ಆರು ಆರೋಪಗಳ ಮೇಲೆ 2019 ರಲ್ಲಿ ಬಿಷ್ಣೋಯ್ ಅವರಿಗೆ ಐದು ವರ್ಷಗಳ ಹಿಂದೆ ಶಿಕ್ಷೆ ವಿಧಿಸಲಾಯಿತು.
2022 ರಲ್ಲಿ ಪಂಜಾಬ್‌ನಲ್ಲಿ ಸಿಧು ಮೂಸೆವಾಲಾ ಪ್ರದರ್ಶನ ನೀಡುತ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಕೊಂದಾಗ ಈ ಗ್ಯಾಂಗ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಕೆನಡಾ ಮೂಲದ ಗೋಲ್ಡಿ ಬ್ರಾರ್ ಗ್ಯಾಂಗ್ ಭಾರತದಿಂದ “ಭಯೋತ್ಪಾದಕ” ಎಂದು ಗೊತ್ತುಪಡಿಸಿದ ಸತೀಂದರ್ಜಿತ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಹತ್ಯೆಯನ್ನು ತಾನೇ ಮಾಡಿದ್ದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.
ಈ ಗ್ಯಾಂಗ್ ರಾಜಸ್ಥಾನದ ಮರುಭೂಮಿಯ ಬಿಷ್ಣೋಯ್ ಹಿಂದೂ ಪಂಥದ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತದೆ. ಅಂತೆಯೇ ಇದೇ ಬಿಷ್ಣೋಯ್ ಸಮುದಾಯವು ತಮ್ಮ ಗುರುವಿನ ಪುನರ್ಜನ್ಮ ಎಂದು ಕೃಷ್ಣಮೃಗಗಳನ್ನು ಪರಿಗಣಿಸುತ್ತದೆ. ಇದೇ ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧವೂ ಈ ಗ್ಯಾಂಗ್ ಸೇಡಿತೀರಿಸಿಕೊಳ್ಳುವ ತವಕದಲ್ಲಿದೆ.