ಹೊಸದಿಲ್ಲಿ:
ಚಳಿಗಾಲ ಪ್ರಾರಂಭವಾಗುವ ಮೊದಲೇ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವಾಯುಮಾಲಿನ್ಯ ದಿಂದ ಕೂಡಿದ್ದು, ಶನಿವಾರ ಬೆಳಿಗ್ಗೆ ಸಂಪೂರ್ಣ ಹೊಗೆಯ ತೆಳುವಾದ ಪದರವು ಆವರಿಸಿತ್ತು . ಗಾಳಿಯ ಗುಣಮಟ್ಟ ಕಳಪೆ ವರ್ಗಕ್ಕೆ ಇಳಿದಿದೆ. ದಿಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು 273ರಷ್ಟಿದ್ದರೆ, ಗಾಜಿಯಾಬಾದ್ 246 ಮತ್ತು ನೋಯ್ಡಾ 228 ಇತ್ತು. ದಿಲ್ಲಿ, ಅಕ್ಷರಧಾಮ ಮತ್ತು ಆನಂದ್ ವಿಹಾರ್ ಪ್ರದೇಶದಲ್ಲಿ ಅತ್ಯಧಿಕ ಎಕ್ಯೂಐ 334 ಇದ್ದು ‘ಅತ್ಯಂತ ಕಳಪೆ’ ಎಂದು ವರ್ಗೀಕರಿಸಲಾಗಿದೆ.
ಮಾಲಿನ್ಯದ ಸಮಸ್ಯೆಗೆ ಸಂಬಂಧಿಸಿದಂತೆ ದಿಲ್ಲಿಯ ಪರಿಸರ ಸಚಿವ ಗೋಪಾಲ್ ರೈ ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ನಂತರ ಮಾತನಾಡಿ, ʼʼಚಳಿಗಾಲ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ಹವಾಮಾನದ ಗುಣಮಟ್ಟ ಕ್ಷೀಣಿಸುತ್ತದೆ. ಹದಗೆಡುತ್ತಿರುವ ವಾತಾವರಣದ ಸ್ಥಳೀಯ ಮೂಲಗಳನ್ನು ಪತ್ತೆ ಹಚ್ಚಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆʼʼ ಎಂದರು.
ʼʼದಿಲ್ಲಿಯಲ್ಲಿ 13 ಹಾಟ್ಸ್ಪಾಟ್ಗಳಿವೆ. ಅಲ್ಲಿ AQI 300 ದಾಟಿದೆ- ವಜೀರ್ಪುರ, ಮುಂಡ್ಕಾ, ರೋಹಿಣಿ, ಜಹಾಂಗೀರ್ಪುರಿ, ಆನಂದ್ ವಿಹಾರ್, ದ್ವಾರಕಾ ಸೆಕ್ಟರ್ -8, ಬವಾನಾ, ನರೇಲಾ, ವಿವೇಕ್ ವಿಹಾರ್, ಓಖ್ಲಾ ಹಂತ 2, ಪಂಜಾಬಿ ಬಾಗ್, ಅಶೋಕ್ ವಿಹಾರ್ ಮತ್ತು ಆರ್.ಕೆ.ಪುರಂನಲ್ಲಿ ಎಕ್ಯೂಐ ಮಟ್ಟವು ಅತ್ಯಧಿಕವಾಗಿದೆʼʼ ಎಂದು ತಿಳಿಸಿದರು.
ಪ್ರಸ್ತುತ, ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಭಾಯಿಸಲು ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್-1 ಅಡಿಯಲ್ಲಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ದಿಲ್ಲಿ ಸರ್ಕಾರ ಹೇಳಿದೆ. ಪರಿಸರ ಸಚಿವ ಗೋಪಾಲ್ ರೈ ಮತ್ತು ಹಿರಿಯ ಅಧಿಕಾರಿಗಳು ಹಾಗೂ ದಿಲ್ಲಿ ಮುಖ್ಯಮಂತ್ರಿ ಅತಿಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಘೋಷಣೆಯನ್ನು ಮಾಡಲಾಗಿದೆ.