ಬೆಂಗಳೂರು:
ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ? ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರೇ, ಬೆಂಗಳೂರಿನಲ್ಲಿ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಾವು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಇನ್ನೂ ಸರಿಯಾಗಿ ಒಂದು ತಿಂಗಳೂ ಕಳೆದಿಲ್ಲ. ಆದರೆ ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ?
1.) 6,000 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಅಂತ ಹೇಳಿದ್ದು ನಿಜವಾ ಅಥವಾ ಹಸಿ ಸುಳ್ಳಾ?
2.) 6,000 ರಸ್ತೆ ಗುಂಡಿ ಮುಚಿದ್ದೇವೆ ಎಂದು ಒಂದೆರಡು ಫೋಟೋ, ವಿಡಿಯೋ ಕಳಿಸಿ ಅಮೆರಿಕದಲ್ಲಿದ್ದ ತಮಗೆ ಅಧಿಕಾರಿಗಳು ಟೋಪಿ ಹಾಕಿದ್ದಾರಾ?
3.) ಅಥವಾ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿ ಮಾಡಿ ಕಮಿಷನ್ ಹೊಡೆದು ಜನರ ಹಣ ಲಪಾಟಾಯಿಸಿದ್ದೀರಾ?
4.) ಅಥವಾ ರಸ್ತೆಗುಂಡಿ ಮುಚ್ಚಿದ್ದ ಕಾಮಗಾರಿ ಒಂದೇ ತಿಂಗಳಲ್ಲಿ ಕಿತ್ತು ಹೋಗುವಷ್ಟು ಕಳಪೆ ಕಾಮಗಾರಿ ಆಗಿತ್ತ?
ಉತ್ತರ ಕೊಡಿ ಉಪಮುಖ್ಯಮಂತ್ರಿಗಳೇ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ? ಎಂದಿದ್ದಾರೆ.