ಬೆಂಗಳೂರು:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರ ಪುತ್ರಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಎಲ್ಲವನ್ನೂ ಬೆಳಕಿಗೆ ತರುತ್ತೇನೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು ರಾಜಕೀಯಕ್ಕೆ ಬರದಂತೆ ತಡೆದರು. ಸಮಾಜ ಸೇವೆಗೆ ಇಳಿಯದಂತೆ ತಡೆದರು. ವಿದ್ಯಾಭ್ಯಾಸ ಮಾಡದಂತೆ ತಡೆದರು. ಯಾವ ಕ್ಷೇತ್ರದಲ್ಲೂ ಮುಂದೆ ಬರಲು ಬಿಡುತ್ತಿಲ್ಲ. ಕೊನೆಗೆ, ಜೀವನದಲ್ಲಿ ನೆಮ್ಮದಿಯಾಗಿರುವುದಕ್ಕೂ ಬಿಡುತ್ತಿಲ್ಲ. ನನ್ನ ಜೀವನದ ಸತ್ಯವನ್ನು ಹೊರತರುತ್ತೇನೆ’ ಎಂದು ಹೇಳಿದ್ದಾರೆ.
ನನ್ನಿಂದ ಏನು ಸಮಸ್ಯೆ, ಏಕೆ ದ್ವೇಷ ತಿಳಿಯುತ್ತಿಲ್ಲ. ನಿಜವಾದ ಕಥೆ ಬೇರೆಯೇ ಇದೆ, ಸತ್ಯ ಬೇರೆಯೇ ಇದೆ. ಆ ಸತ್ಯವನ್ನು ಬೇಗ ಹೊರಗಡೆ ತರುತ್ತೇನೆ’ ಎಂದಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಯೋಗೇಶ್ವರ್ ಹಾಗೂ ಪುತ್ರಿ ನಿಶಾ ಮಧ್ಯೆ ಕಳೆದ 4-5 ತಿಂಗಳಿಂದ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಶಾ ಅವರು ತಂದೆ ಪರ ಪ್ರಚಾರ ನಡೆಸಿದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು.
ಇದೀಗ ಪಕ್ಷೇತರವಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತಿರುವ ಸಿ.ಪಿ ಯೋಗೇಶ್ವರ ವಿರುದ್ಧ ಮಗಳೇ ತಿರುಗಿ ಬಿದ್ದಿದ್ದಾರೆ. ಕ್ಷೇತ್ರದಲ್ಲಿ ತಂದೆ ಇಮೇಜ್ ಡ್ಯಾಮೇಜ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಸದ್ಯ ಚುನಾವಣೆ ಸಂದರ್ಭವಾಗಿದ್ದರಿಂದ ಕಾಂಗ್ರೆಸ್‌ಗೆ ಅಪ್ಪ ಮಗಳ ಜಗಳ ವರದಾನವಾಗುವ ಸಾಧ್ಯತೆ ಇದೆ. ನನ್ನ ವಿರುದ್ಧ ನನ್ನ ತಂದೆ ಮತ್ತು ನಮ್ಮ ಚಿಕ್ಕಮ್ಮ ಶೀಲಾ ಯೋಗೇಶ್ವರ್ ಕುತಂತ್ರ ನಡೆಸಿ ನಾನು ಜನರ ಬಳಿ ಹೋಗುವುದನ್ನು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.