ಇಂದು ಸಚಿವ ಸಂಪುಟ ಸಭೆ : ಒಳಮೀಸಲಾತಿ ಬಗ್ಗೆ ಚರ್ಚೆ ಸಾಧ್ಯತೆ….!

ಬೆಂಗಳೂರು:

   ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಹಾಗೂ ಜಾತಿ ಗಣತಿ ವರದಿ ಬಿಡುಗಡೆ ಕುರಿತು ರಾಜ್ಯ ಸರ್ಕಾಕ ಇಕ್ಕಟ್ಟಿಗೆ ಸಿಲುಕಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚಿಸಿ ಸಂಬಂಧಪಟ್ಟ ಸಮುದಾಯಗಳಿಗೆ ಸಂದೇಶ ರವಾನಿಸುವ ಸಾಧ್ಯತೆ ಇದೆ.

   ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನ.13 ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವುದರಿಂದ ಯಾವುದೇ ದೃಢ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಿ ಚುನಾವಣಾ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲವು ಸಮುದಾಯಗಳಿಗೆ ಸಂದೇಶ ರವಾನಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

   ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ-2015ನ್ನು ಫೆ. 9ರಂದು ಆಯೋಗದ ಅಂದಿನ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರಿಂದ ಸ್ವೀಕರಿಸಿದ್ದ ಸರಕಾರ, ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಪ್ರಕಟಿಸಿತ್ತು. ಇದಕ್ಕೆ ಸಾಕಷ್ಟು ವಿರೋಧಗಳೂ ಇದ್ದು ವಿವಾದಾಸ್ಪದ ವರದಿಯಾಗಿದೆ.

   ಆಯೋಗದ ಹಿಂದಿನ ಸದಸ್ಯ ಕಾರ್ಯದರ್ಶಿ ಸಹಿಯನ್ನೇ ಮಾಡಿರಲಿಲ್ಲ, ವರದಿಯಲ್ಲಿನ ಅಂಶಗಳು ಸೋರಿಕೆಯಾಗಿವೆ, ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಲಾಗಿದೆ ಎಂಬಿತ್ಯಾದಿ ಆರೋಪಗಳೂ ಕೇಳಿಬಂದಿದೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಹಿರಿಯ ಮುಖಂಡರೂ ಆದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಜಾತಿ ಗಣತಿ ವರದಿಗೆ ವಿರೋಧಿಸಿದ್ದಾರೆ.

ವರದಿಯಲ್ಲಿ ಏನಿದೆ ಎಂಬುದನ್ನೇ ನೋಡದೆ ಈ ರೀತಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಅಭಿಪ್ರಾಯಪಟ್ಟಿದ್ದು, ಇದೇ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಸಭೆಯನ್ನೂ ನಡೆಸಿ, ಕೆಲ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ಸಹ ಮಾಡಿದ್ದರು. ವಿಪಕ್ಷ ಬಿಜೆಪಿ ಕೂಡ ವರದಿ ಮಂಡನೆಗೆ ತಮ್ಮ ವಿರೋಧವಿಲ್ಲ. ಒಮ್ಮೆ ಸಂಪುಟ ಸಭೆಯ ಮುಂದೆ ಮಂಡನೆಯಾಗಲಿ, ಅದರಲ್ಲಿರುವ ಅಂಶಗಳನ್ನು ಆಧರಿಸಿ ನಮ್ಮ ನಿಲುವು ಪ್ರಕಟಿಸುತ್ತೇವೆ ಎಂದಿತ್ತು. ಅದರಂತೆ, ಅ. 18ರ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಸಿಎಂ ಘೋಷಿಸಿದ್ದರು. ಬಳಿಕ ಅ. 25ರಂದು ಮಂಡಿಸುವುದಾಗಿ ಹೇಳಿದರು. ಅದಾದ ಅನಂತರ ಅ. 28 ರ ಸೋಮವಾರ ಮಂಡಿಸುವುದಾಗಿ ಪ್ರಕಟಿಸಿದ್ದರು.

ಇದೀಗ ಸೋಮವಾರ ಸಂಪುಟ ಸಭೆಯೇನೋ ನಡೆಯುತ್ತಿದೆ. ಆದರೆ, ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದನ್ನೇ ನೆಪವಾಗಿಸಿಕೊಂಡು ವರದಿ ಮಂಡನೆ ಬೇಡ ಎನ್ನುವ ತೀರ್ಮಾನಕ್ಕೆ ಸರಕಾರ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಅನುಷ್ಠಾನಕ್ಕೆ ಆ.1ರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ತೀರ್ಪಿನ ಅನ್ವಯ ಕಾಂಗ್ರೆಸ್‌ನ ಎಲ್ಲ ಇಪ್ಪತ್ತಾರು ಶಾಸಕರಲ್ಲಿ ಒಮ್ಮತ ಮೂಡಿದೆ. ಹೀಗಾಗಿ ಮೀಸಲಾಗಿ ವರ್ಗೀಕರಿಸಲು ಪರಿಗಣಿಸಬೇಕಾದ ಪ್ರಾಯೋಗಿಕ ದತ್ತಾಂಶಗಳ ಕುರಿತು ಸ್ಪಷ್ಟೀಕರಣವನ್ನು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಂಪುಟ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link