ವಾಷಿಂಗ್ಟನ್:
ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಸಂಜೆ ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.ಹಿಂದಿನ ವರ್ಷಗಳ ಸಂಪ್ರದಾಯದಂತೆ ಅಧ್ಯಕ್ಷರು ಭಾಷಣಕ್ಕೂ ಮುನ್ನಾ ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ. ಬಳಿಕ ಅವರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಇದು ಅಧ್ಯಕ್ಷ ಬೈಡನ್ ಅವರ ಶ್ವೇತಭವನದಲ್ಲಿನ ಕೊನೆಯ ದೀಪಾವಳಿ ಆಚರಣೆಯಾಗಿದೆ. ಅಧ್ಯಕ್ಷರ ಭಾಷಣದ ವೇಳೆ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ಸುನಿ ವಿಲಿಯಮ್ಸ್ ಅವರ ವೀಡಿಯೊ ಸಂದೇಶವಿದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಶುಭಾಶಯವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಹಿಂದೂ ಧರ್ಮದ ಸುನೀತಾ ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಪಂಚದಾದ್ಯಂತದ ಜನರಿಗೆ ದೀಪಾವಳಿ ಶುಭಾಶಯಗಳನ್ನು ಕಳುಹಿಸಿದ್ದಾರೆ. ಸಮೋಸಾಗಳು, ಉಪನಿಷತ್ತು ಮತ್ತು ಭಗವದ್ಗೀತೆಯ ಪ್ರತಿಗಳು ಸೇರಿದಂತೆ ಅನೇಕ ಭಾರತೀಯ, ಹಿಂದೂ ಸಾಂಸ್ಕೃತಿಕ ವಸ್ತುಗಳನ್ನು ಆಕೆ ತನ್ನ ಪರಂಪರೆ ಆಚರಿಸಲು ಬಾಹ್ಯಾಕಾಶಕ್ಕೆ ತಂದಿದ್ದಾಳೆ ಎಂದು ಅದು ಹೇಳಿದೆ.