ಮೂರನೇ ಟೆಸ್ಟ್‌ : ಮತ್ತೆ ಸಂಕಷ್ಟದಲ್ಲಿ ಭಾರತ…!

ಮುಂಬಯಿ: 

    ಪಂದ್ಯದಲ್ಲಿ‌ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲ್ಯಾಂಡ್‌ ಡೆವೋನ್‌ ಕಾನ್ವೆ(4) ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾದರೂ ಕೂಡ ಆ ಬಳಿಕ ವಿಲ್‌ ಯಂಗ್‌ ಮತ್ತು ನಾಯಕ ಟ್ಯಾಮ್‌ ಲ್ಯಾಥಮ್‌ ತಾಳ್ಮೆಯ ಆಟ ಆಡಿ ದ್ವಿತೀಯ ವಿಕೆಟಿಗೆ 57 ರನ್‌ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಿದ ಶ್ರೇಯಸ್ಸು ವಾಷಿಂಗ್ಟನ್‌ ಸುಂದರ್‌ಗೆ ಲಭಿಸಿತು. 28 ರನ್‌ ಬಾರಿಸಿದ್ದ ಲ್ಯಾಥಂ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಈ ವಿಕೆಟ್‌ ಕಿತ್ತ ಬೆನ್ನಲ್ಲೇ ಅಪಾಯಕಾರಿ ರಚಿನ್‌ ರವೀಂದ್ರ(5)ಗೆ ಸುಂದರ್‌ ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಲು ಬಿಡಲಿಲ್ಲ. ಅವರನ್ನು ಕೂಡ ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಯನ್‌ಗೆ ಅಟ್ಟಿದರು. ಉಭಯ ಆಟಗಾರರ ವಿಕೆಟ್‌ ಕೀಳುವಲ್ಲಿ ಸುಂದರ್‌ಗೆ ಕೊಹ್ಲಿ ನೀಡಿದ ಸಲಹೆ ಪಂದ್ಯದಲ್ಲಿ ಗಮನಸೆಳೆಯಿತು. 

    ಚಹಾ ವಿರಾಮದ ತನಕ ಉತ್ತಮ ಸ್ಥಿತಿಯಲ್ಲಿದ್ದ ಕಿವೀಸ್‌ ವಿಲ್‌ ಯಂಗ್‌ ಮತ್ತು ಮಿಚೆಲ್‌ ಜೋಡಿ ಬೇರ್ಪಟ್ಟ ಬಳಿಕ ಹಠಾತ್‌ ಕುಸಿಯತೊಡಗಿತು. ರವೀಂದ್ರ ಜಡೇಜಾ ತಮ್ಮ ಕೈ ಚಳಕದ ಮೂಲಕ 5 ವಿಕೆಟ್‌ ಕಿತ್ತು ಭಾರತಕ್ಕೆ ಯಶಸ್ಸು ತಂದುಕೊಟ್ಟರು. ಇದು ಜಡೇಜಾ ಅವರ 14ನೇ ಐದು ವಿಕೆಟ್‌ ಗೊಂಚಲು. ಯಂಗ್‌ ಮತ್ತು ಮಿಚೆಲ್‌ ಸೇರಿಕೊಂಡು ನಾಲ್ಕನೇ ವಿಕೆಟ್‌ಗೆ 57 ರನ್‌ ಒಟ್ಟುಗೂಡಿಸಿದರು. ವಿಲ್‌ ಯಂಗ್‌ 4 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 71 ರನ್‌ ಬಾರಿಸಿ ಔಟಾದರು. 

   ಯಂಗ್‌ ವಿಕೆಟ್‌ ಪತನದ ಬಳಿಕ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತಿದ್ದ ಮಿಚೆಲ್‌ಗೆ ಸರಿಯಾದ ಜತೆಯಾಟ ಸಿಗದ ಕಾರಣ ತಂಡಕ್ಕೆ ದೊಡ್ಡ ಮೊತ್ತ ಹರಿದು ಬರಲಿಲ್ಲ. ಮಿಚೆಲ್‌ ಏಕಾಂಗಿ ಹೋರಾಟ ನಡೆಸಿ 82 ರನ್‌ ಗಳಿಸಿದ್ದ ವೇಳೆ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್‌ ಶರ್ಮಾ ಕೈಗೆ ಸುಲಭ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ತಲಾ 3 ಸಿಕ್ಸರ್‌ ಮತ್ತು ಬೌಂಡರಿ ದಾಖಲಾಯಿತು. ಕಿವೀಸ್‌ ಪರ ಟಾಮ್‌ ಬ್ಲಂಡೆಲ್‌ ಮತ್ತು ಮ್ಯಾಟ್‌ ಹೆನ್ರಿ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್‌ ಸುಂದರ್‌ 81 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರು.

   11 ವರ್ಷಗಳ ಬಳಿಕ ಮುಂಬೈಯಲ್ಲಿ ಟೆಸ್ಟ್‌ ಆಡಲಿಳಿದ ರೋಹಿತ್‌ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಕಂಡರು. ಕೇವಲ 3 ಬೌಂಡರಿಗೆ ಸೀಮಿತರಾಗಿ 18 ರನ್‌ ಬಾರಿಸಿ ಮ್ಯಾಟ್‌ ಹೆನ್ರಿಗೆ ವಿಕೆಟ್‌ ಒಪ್ಪಿಸಿದರು. 16 ರನ್‌ ಗಳಿಸಿದ್ದ ವೇಳೆ ಮಿಲಿಯಂ ಓರ್ಕೆ ಅವರಿಂದ ಕ್ಯಾಚ್‌ ಕೈಚೆಲ್ಲಿ ಜೀವದಾನ ಪಡೆದರೂ ಇದರ ಲಾಭವೆತ್ತಲು ಅವರಿಂದ ಸಾಧ್ಯವಾಗಲಿಲ್ಲ.

   ಯಶಸ್ವಿ ಜೈಸ್ವಾಲ್‌ 30 ರನ್‌ ಗಳಿಸಿದ್ದ ವೇಳೆ ರಿವರ್ಸ್‌ ಸ್ವೀಪ್‌ ಮಾಡುವ ಯತ್ನದಲ್ಲಿ ಅಜಾಜ್‌ ಪಟೇಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಸಂಕಟಕ್ಕೆ ಸಿಲುಕಿದರು. ಈ ವಿಕೆಟ್‌ ಪತನದ ಬಳಿಕ ನೈಟ್​ ವಾಚ್​ಮ್ಯಾನ್​ ಆಗಿ ಮೈದಾನಕ್ಕಿಳಿದಿದ್ದ ಮೊಹಮ್ಮದ್‌ ಸಿರಾಜ್‌(0) ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ ಬಂದ ವಿರಾಟ್‌ ಕೊಹ್ಲಿ ಅವರು ಮ್ಯಾಟ್‌ ಹೆನ್ರಿ ಎಸೆತ ಡೈರೆಕ್ಟ್‌ ಥ್ರೋಗೆ ರನೌಟ್‌ ಆದರು. ಅವರ ಗಳಿಕೆ 4 ರನ್‌. 

   ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 5 ವಿಕೆಟ್‌ ಕೀಳುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 314 ವಿಕೆಟ್‌ಗಳನ್ನು ಪೂರೈಸಿ ಭಾರತ ಪರ ಅತ್ಯಧಿಕ ಟೆಸ್ಟ್‌ ವಿಕೆಟ್‌ ಕಿತ್ತ ಬೌಲರ್‌ಗಳ ಯಾದಿಯಲ್ಲಿ ಮಾಜಿ ಆಟಗಾರ ಜಹೀರ್ ಖಾನ್(312) ಹಾಗೂ ಇಶಾಂತ್​ ಶರ್ಮಾ(312*) ಅವರನ್ನು ಹಿಂದಿಕ್ಕಿದ್ದಾರೆ.

   ಇದೇ ವೇಳೆ ಭಾರತದ ನೆಲದಲ್ಲಿ ಅತ್ಯಧಿಕ ಐದು ವಿಕೆಟ್‌ ಗೊಂಚಲು ಪಡೆದ ಮಾಜಿ ಆಟಗಾರ ಕಪಿಲ್‌ ದೇವ್‌ ದಾಖಲೆಯನ್ನೂ ಜಡೇಜಾ ಹಿಂದಿಕ್ಕಿದ್ದಾರೆ. ಕಪಿಲ್‌ ತವರಿನಲ್ಲಿ 11 ಬಾರಿ ಐದು ವಿಕೆಟ್ ಪಡೆದಿದ್ದರೆ, ಜಡೇಜಾ 12 ಬಾರಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಕಪಿಲ್‌ ದೇವ್‌ 23 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

Recent Articles

spot_img

Related Stories

Share via
Copy link