ವಕ್ಫ್‌ ಬೋರ್ಡ್‌ ವಿಚಾರವಾಗಿ ಸರ್ಕಾರದ ವಿರುದ್ಧ ಮುಗಿಬೀಳಲು ಮುಂದಾದ ಬಿಜೆಪಿ….!

ಬೆಂಗಳೂರು

    ವಕ್ಫ್ ಬೋರ್ಡ್ ಜಮೀನು ವಿವಾದವನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ. ಉಪಚುನಾವಣೆ ಹೊತ್ತಲ್ಲೇ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜಾಗಿದೆ. ಇಂದು ರಾಜ್ಯಾದ್ಯಂತ ವಕ್ಫ್​​ ಬೋರ್ಡ್​ ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಲಿದೆ. ಬಳ್ಳಾರಿಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ವಕ್ಫ್​ ಬೋರ್ಡ್ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ. 

    ವಕ್ಫ್​​ ಬೋರ್ಡ್ ಜಮೀನು ವಿವಾದವನ್ನು ಖಂಡಿಸಿ ಬಿಜೆಪಿ ನಾಯಕರು ಧರಣಿ ನಡೆಸಲು ಸಜ್ಜಾಗಿದ್ದರೆ, ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಮಾಡ್ಬೇಕು ಎಂಬುದು ಬಿಜೆಪಿ ಹುನ್ನಾರ. ನೋಟಿಸ್ ಹಿಂಪಡೆಯುವಂತೆ ಸೂಚಿಸಿದ ಮೇಲೂ, ಬಿಜೆಪಿ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ? ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಹುಟ್ಟು ಗುಣವಾಗಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿ ಕಿಡಿಕಾರಿದ್ದಾರೆ.

   ರಾಜ್ಯದಲ್ಲಿ ವಕ್ಫ್ ವಿವಾದ ಕಿಚ್ಚು ಜೋರಾಗಿರುವ ಹೊತ್ತಲ್ಲೇ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಕೂಡ ಕಣ ಪ್ರವೇಶಿಸಿದ್ದಾರೆ. ವಕ್ಫ್​ ಆಸ್ತಿ ಗದ್ದಲದಿಂದ ರೈತರು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ವಕ್ಫ್​ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಸಾರ್ವಜನಿಕ ಆಸ್ತಿ ಮೇಲೆ ವಕ್ಫ್ ಬೋರ್ಡ್​ನ ಹಿಡಿತವನ್ನು ತಡೆಯಬೇಕು ಎಂದಿದ್ದಾರೆ. 

   ಕಾಂಗ್ರೆಸ್ ವಿರುದ್ಧ ವಕ್ಫ್​ ವಿವಾದ ಧಗ ಧಗಿಸುತ್ತಿರುವಾಗಲೇ ಬಿಜೆಪಿಯತ್ತ ಹೊಸಬಾಂಬ್ ಸ್ಫೋಟ ಆಗಿದೆ. ವಕ್ಫ್ ಬೆಂಬಲವಾಗಿ ಬಸವರಾಜ ಬೊಮ್ಮಾಯಿ ಮಾತನಾಡಿರುವ ವಿಡಿಯೋವೊಂದನ್ನ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. 

   ಈ ವಿಡಿಯೋದಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ವಕ್ಫ್‌ಗೆ ಸೇರಿದ 2000 ಎಕರೆ ಆಸ್ತಿ ಖಾಸಗಿಯವರ ವಶದಲ್ಲಿದೆ. ಮರಳಿ ಪಡೆಯುವವರೆಗೂ ಸುಮ್ಮನೆ ಕೂರಬಾರದು ಎಂದು ಹೇಳಿದ್ದರು. ಇದನ್ನೇ ಪ್ರತ್ಯಸ್ತ್ರ ಮಾಡಿಕೊಂಡ ಕಾಂಗ್ರೆಸ್‌ ಪಡೆ ಬಿಜೆಪಿಗೆ ತಿವಿದಿದೆ. 

    ಸಚಿವ ಪ್ರಿಯಾಂಕ್ ಖರ್ಗೆ ಸಿಡಿಸಿರೋ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಬೊಮ್ಮಾಯಿ, ನಾನು ವಕ್ಫ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದೆ. ಆದರೆ ವಕ್ಫ್ ಮೀಟಿಂಗ್ ಮಾಡಿಲ್ಲ, ರೈತರಿಗೂ ನಾನು ನೋಟಿಸ್ ಕೊಟ್ಟಿಲ್ಲ ಎಂದಿದ್ದಾರೆ. 

    ಈಗಾಗಲೇ ನೋಟಿಸ್ ಹಿಂಡಪೆಯಲು, ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಲು ಸಿಎಂ ಸಿದ್ದರಾಮಯ್ಯ ಖಡಕ್ ಆದೇಶ ಮಾಡಿದ್ದಾರೆ. ಆದರೆ, ವಕ್ಫ್ ವಿವಾದವನ್ನೇ ಕೈಗೆತ್ತಿಕೊಂಡು ಬೃಹತ್ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ. ಈ ಕದನ ಇನ್ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆಯೋ ಕಾದುನೋಡಬೇಕಿದೆ.

Recent Articles

spot_img

Related Stories

Share via
Copy link