ಬಿಹಾರ : ಮಹಿಳೆಯ ತಲೆ ಬೋಳಿಸಿ ಮೆರವಣಿಗೆ ಮಾಡಿದ ಸ್ಥಳೀಯರು!

ಬಿಹಾರ

   ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರ ಪ್ರದೇಶದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಥಳಿಸಿ, ಆಕೆಯ ತಲೆಬೋಳಿಸಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ನಡೆದಿದೆ. ಈ ಘಟನೆಯ ಬಗ್ಗೆ ವಾಲ್ಮೀಕಿ ನಗರ ಎಸ್ಎಚ್ಒ ಸಂಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಕಂಡ ಸ್ಥಳೀಯರು ಆಕೆಯನ್ನು ಹಿಡಿದು ಆಕೆಯ ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಕ್ಷಿಸಿದ್ದಾರೆ.

   ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಸಂತ್ರಸ್ತೆ ಈ ಹಿಂದೆ ಎರಡು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆಕೆಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ  ಈ ಪ್ರಕರಣದಲ್ಲೂ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಕೆಯ ಮೇಲೆ ಈ ರೀತಿಯಲ್ಲಿ ಶೋಷಣೆ ಮಾಡಿದ್ದಕ್ಕಾಗಿ ಪೊಲೀಸರು ಕನಿಷ್ಠ 100 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

   ಇಂಥ ಕಳ್ಳತನ ಪ್ರಕರಣ ಬಿಹಾರದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಕ್ಟೋಬರ್‌ನಲ್ಲಿ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್)ನಿಂದ ಆರು ದಿನಗಳ ಗಂಡು ಮಗುವನ್ನು ಮಹಿಳೆಯೊಬ್ಬಳು ಕಳ್ಳತನ ಮಾಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದರು. ರಜನಿ ಮಾಲಾ ಎಂಬ ಮಹಿಳೆಯನ್ನು ಬಿಹಾರದ ವೈಶಾಲಿ ಜಿಲ್ಲೆಯಿಂದ ಬಂಧಿಸಲಾಗಿತ್ತು. ಆಕೆಯ ಕೈಯಿಂದ ಮಗುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಎಸ್ಪಿ ರಾಜ್ ಕುಮಾರ್ ಮೆಹ್ತಾ ತಿಳಿಸಿದ್ದಾರೆ. ಮಾಲಾ ಮಗುವನ್ನು ಕದಿಯುವ ಉದ್ದೇಶದಿಂದ ರಿಮ್ಸ್‌ಗೆ  ಬಂದಿದ್ದಳಂತೆ.

   ರಾಮಗಢ ಜಿಲ್ಲೆಯ ನಿವಾಸಿ ರಬಿತಾ ಅವರು ಮಗುವಿನೊಂದಿಗೆ ಇರುವುದನ್ನು ಗಮನಿಸಿದ ಮಾಲಾ ರಬಿತಾ ಅವರೊಂದಿಗೆ  ಮಾತುಕತೆ ನಡೆಸಿ ಅವರ ಜೊತೆ ತುಂಬಾ ಕ್ಲೋಸ್ ಆದಳಂತೆ. ದಿನದಲ್ಲಿ ಹೆಚ್ಚಿನ ಸಮಯ ರಬಿತಾ ಜೊತೆಗೆ ಕಳೆಯುತ್ತಿದ್ದಳಂತೆ. ಇದರಿಂದ ಮಾಲಾಳನ್ನು ನಂಬಿದ ರಬಿತಾ ತನ್ನ ಮಗುವಿಗೆ ಇಂಜೆಕ್ಷನ್ ಹಾಕಿಸಿಕೊಂಡು ಬರಲು ಮಾಲಾಗೆ ಒಪ್ಪಿಸಿದಾಗ ಆಕೆ ಮಗುವಿನೊಂದಿಗೆ ಪರಾರಿಯಾಗಿದ್ದಾಳೆ.  ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಮಾಲಾ ಮಗುವನ್ನು ಕದ್ದೊಯ್ಯುತ್ತಿರುವ ದೃಶ‍್ಯ ಸೆರೆಯಾಗಿತ್ತು.

   ಹಾಗಾಗಿ ಪೊಲೀಸರು ಮಾಲಾಳನ್ನು ಸೆರೆ ಹಿಡಿದಿದ್ದಾರೆ. ವಿಚಾರಣೆ ವೇಳೆ ಮಗುವಿಲ್ಲದ ಕಾರಣ ಮಾಲಾಳನ್ನು ಆಕೆಯ ಗಂಡನ ಮನೆಯವರು ನಿಂದಿಸುತ್ತಿದ್ದರಂತೆ. ಕದ್ದ ಮಗುವನ್ನು ತನ್ನ ಮಗುವೆಂದು ನಂಬಿಸಲು ಮಾಲಾ ಮಗುವನ್ನು ಕಳ್ಳತನ ಮಾಡಿದ್ದಳಂತೆ.

Recent Articles

spot_img

Related Stories

Share via
Copy link