ನವದೆಹಲಿ:
ವಿಷಕಾರಿ ಹಾವಿನ ಕಡಿತಕ್ಕೆ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಸಾವು ಖಚಿತ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೂ ಕೆಲವೊಮ್ಮೆ ಈ ಹಾವುಗಳೊಂದಿಗೆ ಅನೇಕರು ಸರಸವಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇಷ್ಟೊಂದು ವಿಷಕಾರಿಯಾಗಿರುವ ಹಾವುಗಳ ವಿಷದ ಪ್ರಭಾವ ಕೆಲವು ಪ್ರಾಣಿಗಳ ಮೇಲೆ ಬೀರುವುದಿಲ್ಲ.
ಮನುಷ್ಯರನ್ನು ಕೊಲ್ಲಲು ಸಣ್ಣ ಪ್ರಮಾಣದ ವಿಷವೂ ಸಾಕಾಗುತ್ತದೆ. ಆದರೆ ಕೆಲವೊಂದು ಜೀವಿಗಳ ಮೇಲೆ ಹಾವಿನ ವಿಷ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ಹೀಗಾಗಿ ಈ ಜೀವಿಗಳು ಕೆಲವೊಮ್ಮ ಹಾವುಗಳನ್ನೂ ಬೇಟೆಯಾಡುತ್ತವೆ. ಹಾವಿನ ವಿಷ ಪ್ರಭಾವ ಬೀರದ ಅನೇಕ ಜೀವಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಮೊಸಳೆ, ಗಿಡುಗ, ಮುಂಗುಸಿ, ಹದ್ದು, ಗೂಬೆ, ಒಪೊಸಮ್, ಮುಳ್ಳುಹಂದಿಗಳು ಸೇರಿವೆ. ಎಂತಹ ವಿಷಕಾರಿ ಹಾವುಗಳಾದರೂ ಸರಿ ಇವುಗಳು ಬೇಟೆಯಾಡುತ್ತವೆ.
ಈ ಜೀವಿಗಳ ದಪ್ಪ ಮತ್ತು ಸಡಿಲವಾದ ಚರ್ಮಕ್ಕೆ ಹಾವಿನ ವಿಷವನ್ನು ತಡೆಯುವ ಶಕ್ತಿ ಇದೆ ಅಲ್ಲದೇ ಇವುಗಳ ದೇಹದ ರಕ್ಷಣಾ ವ್ಯವಸ್ಥೆಯು ವಿಷದ ಪ್ರಭಾವವನ್ನು ತಗ್ಗಿಸುತ್ತದೆ ಎನ್ನುತ್ತಾರೆ ಅಧ್ಯಯನಕಾರರು.ನೋಡಲು ಗಾತ್ರದಲ್ಲಿ ಪುಟ್ಟದಾಗಿದ್ದರೂ ಹಾವಿನ ವಿಷವನ್ನು ಸಮರ್ಥವಾಗಿ ಎದುರಿಸಬಲ್ಲ ಐದು ಪ್ರಮುಖ ಪ್ರಾಣಿಗಳಿವೆ. ಅವು ಯಾವುದು ಗೊತ್ತೇ?
ಹನಿ ಬ್ಯಾಡ್ಜರ್
ಹನಿ ಬ್ಯಾಡ್ಜರ್ ಎಂದು ಕರೆಯಲ್ಪಡುವ ಈ ಜೀವಿಯನ್ನು ಹೆದರಿಕೆ ಇಲ್ಲದ ಪ್ರಾಣಿಯೆಂದು ಕರೆಯುತ್ತಾರೆ. ಈ ಜೀವಿಯ ದೇಹದ ಚರ್ಮವು ಕಾಲು ಇಂಚಿನಷ್ಟು ದಪ್ಪವಿರುತ್ತದೆ. ಇದರ ಹಲ್ಲುಗಳು ಎಷ್ಟು ಶಕ್ತಿ ಶಾಲಿ ಎಂದರೆ ಆಮೆಯ ಮೇಲಿನ ಚಿಪ್ಪನ್ನು ಕೂಡ ಸುಲಭವಾಗಿ ತಿಂದು ಹಾಕಬಲ್ಲದು. ನೋಡಲು ಸಣ್ಣ ಜೀವಿಯಾದರೂ ಇವು ಸಿಂಹಕ್ಕೆ ತಿರುಗೇಟು ನೀಡುತ್ತವೆ.
ಯಾವುದೇ ಮಾಂಸಹಾರಿ ಪ್ರಾಣಿ ಎದುರು ಬಂದು ನಿಂತರೂ ಇವುಗಳು ಎದೆಗುಂದುವುದೇ ಇಲ್ಲ. ಅತ್ಯಂತ ಸಮರ್ಥ ಎದುರಿಸಬಲ್ಲ ಆಕ್ರಮಣಕಾರಿ ಸ್ವಭಾವ ಇವುಗಳದ್ದು. ಇವುಗಳು ಮಾರಣಾಂತಿಕ ವಿಷಪೂರಿತ ಹಾವುಗಳನ್ನೂ ಎದುರಿಸಬಲ್ಲದು. ಯಾಕೆಂದರೆ ಅವುಗಳ ವಿಷ ಇವುಗಳಿಗೆ ಏನೂ ಮಾಡಲಾರದು.
ಕಾಳಿಂಗ ಸರ್ಪ
ರಾಜ ನಾಗರ ಹಾವು ಎಂದೇ ಕರೆಯಲ್ಪಡುವ ಇವು ತನ್ನದೇ ವಿಷದಿಂದ ಇತರ ಜೀವಿಗಳನ್ನು ಕೊಲ್ಲುತ್ತದೆ. ಹೀಗಾಗಿ ಇವುಗಳಿಗೆ ಇತರ ವಿಷಕಾರಿ ಜಂತುಗಳ ವಿಷ ಪ್ರಭಾವ ಬೀರುವುದಿಲ್ಲ. ಈ ಹಾವುಗಳು ಹೆಚ್ಚಾಗಿ ಭಾರತ ಮತ್ತು ಏಷ್ಯಾದ ಇತರ ದೇಶಗಳಲ್ಲಿ ಕಂಡುಬರುತ್ತವೆ.ಇವುಗಳ ಜೀವಿತಾವಧಿ 20 ರಿಂದ 25 ವರ್ಷಗಳು. ಈ ಹಾವುಗಳ ಉದ್ದವು ಸಾಮಾನ್ಯವಾಗಿ 10 ರಿಂದ 13 ಅಡಿಗಳವರೆಗೆ ಇರುತ್ತದೆ. ಇದು ಅನೇಕ ದಿನಗಳವರೆಗೆ ಏನೂ ತಿನ್ನದೇ ಬದುಕುತ್ತವೆ. ಇದು ಇತರ ವಿಷಕಾರಿ ಹಾವುಗಳನ್ನು ಸಹ ತಿನ್ನುತ್ತದೆ.
ಒಪೊಸಮ್
ಇವುಗಳು ಹಾವಿನ ವಿಷದ ವಿರುದ್ಧ ವಿಶಿಷ್ಟವಾದ ರಕ್ಷಣಾ ಕಾರ್ಯವಿಧಾನವನ್ನು ಹೊಂದಿವೆ. ಈ ಜೀವಿಗಳಲ್ಲಿ ಪ್ರೊಟೀನ್ ಇರುತ್ತದೆ. ಇದು ಹಾವಿನ ವಿಷವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಪ್ರಪಂಚದ ಯಾವುದೇ ವಿಷಕಾರಿ ಪ್ರಾಣಿಯು ಕಚ್ಚಿದರೂ ಇದಕ್ಕೆ ಏನೂ ಆಗುವುದಿಲ್ಲ. ನೋಡಲು ಇಲಿಯಂತಿರುವ ಈ ಜೀವಿ ಭಯಭೀತವಾದಾಗ ಸತ್ತಂತೆ ನಟಿಸುವುದರಲ್ಲಿ ಬಲು ನಿಪುಣ. ಈ ಜೀವಿಗಳು ಹೆಚ್ಚಾಗಿ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತವೆ.
ಹಾವು ಮತ್ತು ಚೇಳುಗಳ ವಿಷದಿಂದ ಈ ಜೀವಿ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು, ಈ ರಕ್ಷಣಾತ್ಮಕ ಗುಣ ಅದರ ಡಿಎನ್ ಎ ನಲ್ಲೇ ಇದೆ. ತನ್ನ ರಕ್ಷಣೆಗೆ ಇದು ಮುಳ್ಳಿನ ಕವಚವನ್ನು ಹೊಂದಿವೆ. ದಕ್ಷಿಣ ಯುರೋಪ್, ಆಫ್ರಿಕಾ, ಭಾರತ ಸೇರಿದಂತೆ ಹಲವು ಭಾಗಗಳಲ್ಲಿ ಇವು ಕಂಡು ಬರುತ್ತವೆ.
ಹಾವು ಮತ್ತು ಮುಂಗುಸಿ ಜಗಳದ ಕಥೆಯನ್ನು ನಾವು ಕೇಳಿರುತ್ತೇವೆ. ಇದರಲ್ಲಿ ಹೆಚ್ಚಾಗಿ ಮೇಲುಗೈ ಸಾಧಿಸುವುದು ಮುಂಗುಸಿಯೇ. ಹಾವಿನ ವಿಷ ಇವುಗಳಿಗೆ ಏನು ಮಾಡುವುದಿಲ್ಲ. ಹಾವುಗಳು ಮುಂಗುಸಿಯ ಪ್ರಮುಖ ಆಹಾರವೂ ಹೌದು. ಮುಂಗುಸಿಗಳು ಹಾವುಗಳಿಗಿಂತ ಹೆಚ್ಚು ವೇಗವಾಗಿರುತ್ತವೆ ಮತ್ತು ಅವುಗಳ ದಾಳಿ ಮಾರಣಾಂತಿಕವಾಗಿರುತ್ತದೆ. ಮುಂಗುಸಿಯು ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಹಾವಿನ ವಿಷ ಇವುಗಳ ಮೇಲೆ ಪರಿಣಾಮ ಬೀರುವುದಿಲ್ಲ.