ಬೆಂಗಳೂರು,
ಮುಡಾ ಹಗರಣದ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಚರ್ಚೆ ಮಾಡಿ ಈಗಾಗಲೇ ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿ ಮಾಡಿದ್ದಾರೆ.
ಆ ಮುಹೂರ್ತ ಯಾವುದೆಂದು ಸಿದ್ದರಾಮಯ್ಯನವರೇ ಬಾಯಿ ಬಿಡಬೇಕಿದೆ. ಸಿದ್ದರಾಮಯ್ಯನವರ ರಾಜೀನಾಮೆ ನಿಶ್ಚಿತವಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಪೂರ್ಣ ಅವಧಿ ಪೂರೈಸುವುದಿಲ್ಲ. ಅತಿ ಶೀಘ್ರವೇ ರಾಜೀನಾಮೆ ಕೊಡುತ್ತಾರೆ ಎಂದ ಅವರು, 5 ವರ್ಷ ಕಾಲ ಸಿಎಂ ಆಗಿರುವುದಾಗಿ ರಾಜ್ಯದ ಜನರಿಗೆ ಸಿದ್ದರಾಮಯ್ಯನವರು ಹೇಳಲಿ. ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸವಾಲು ಹಾಕಿದರು.
ಮುಖ್ಯಮಂತ್ರಿಗಳು ಮತ್ತವರ ಕುಟುಂಬ ಆರೋಪಿ ಸ್ಥಾನದಲ್ಲಿ ನಿಂತಿದೆ. ಭ್ರಷ್ಟಾಚಾರದ ಸಂಬಂಧ ರಾಜ್ಯದ ಜನತೆಗೆ ಅವರು ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೋಟಿಸ್ ಕೊಟ್ಟು ತನಿಖೆಗೆ ಬರಲು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುತ್ತೀರಾ? ಆರೋಪಿಯಾಗಿ ಹೋಗುವಿರಾ? ಎಂಬುದನ್ನು ಜನತೆಗೆ ತಿಳಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಸೇರಿ ಕಾಂಗ್ರೆಸ್ಸಿನ ಎಲ್ಲರೂ ಭ್ರಷ್ಟಾಚಾರದ ಕುರಿತು ಉದ್ದುದ್ದ ಭಾಷಣ ಬಿಗಿಯುತ್ತಾರೆ. ರಾಜ್ಯದ ಹಣಕಾಸಿನ ದುಸ್ಥಿತಿಯಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರವು ಗುತ್ತಿಗೆ ಕಾಮಗಾರಿಗೆ ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ಆರೋಪಿ ಸ್ಥಾನದಲ್ಲಿದ್ದಾರೆ. ಇದರ ನಡುವೆ ಉಪ ಚುನಾವಣೆಗಳೂ ನಡೆಯುತ್ತಿವೆ ಎಂದರು.
ಒಂದು ಕಡೆ ವಾಲ್ಮೀಕಿ ನಿಗಮದ ಹಗರಣ, ಇನ್ನೊಂದೆಡೆ ಮೈಸೂರಿನ ಮುಡಾ ಹಗರಣ, ಮತ್ತೊಂದೆಡೆ ಒಬ್ಬ ಬೇಜವಾಬ್ದಾರಿ ಸಚಿವ ಜಮೀರ್ ಅಹಮದ್ ಅವರನ್ನು ಹಿಡಿದುಕೊಂಡು ವಕ್ಫ್ ಬೋರ್ಡಿಗೆ ರೈತರ ಜಮೀನು ಹೊಡೆಯುತ್ತಿದ್ದಾರೆ. ಮಠ ಮಾನ್ಯಗಳ ಜಮೀನು ಕಸಿಯುವ ಪ್ರಯತ್ನ ನಡೆದಿದೆ. ಜಮೀರ್ ಅಹಮದ್ ಷಡ್ಯಂತ್ರದ ಹಿಂದೆ ಮುಖ್ಯಮಂತ್ರಿಗಳ ಕುಮ್ಮಕ್ಕು ಇದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು. ಅಲ್ಲದೇ ರಾಜ್ಯದಲ್ಲಿ ಇವತ್ತು ಅಶಾಂತಿ ಮೂಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಭಾವನೆ ಎಲ್ಲರಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ತಿಳಿಸಿದರು








