ಮಂಗಳೂರು : 5 ವರ್ಷದ ಬಳಿಕ ಒಂದಾದ ತಾಯಿ ಮಕ್ಕಳು..!

ಮಂಗಳೂರು

    ಐದು ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿ  ಮಂಗಳೂರಿನಲ್ಲಿ  ಪತ್ತೆಯಾಗಿದ್ದು, ಮಕ್ಕಳು ಸಂತಸಗೊಂಡಿದ್ದಾರೆ. ಆಸ್ಮಾ ನಾಪತ್ತೆಯಾಗಿದ್ದ ಮಹಿಳೆ. ಮೂಲತಃ ಮುಂಬೈನ  ಥಾಣೆಯ ಮಂಬ್ರಿಲ್​ನ ನಿವಾಸಿ ಆಸ್ಮಾ ಅವರು ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿದ್ದರು. ಬಳಿಕ, ದಂಪತಿ ಮುಂಬೈನ ಥಾಣೆಯ ಮಂಬ್ರಿಲ್​ನಲ್ಲಿ ವಾಸವಾಗಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಆಸ್ಮಾ, 2019ರ ಮೇನಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.

   ಪತಿ ಮನೆಯಿಂದ ಮುಂಬೈನ ಬೈಕಲಾದಲ್ಲಿರುವ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದರು. ಬಳಿಕ, ಆಸ್ಮಾ ದಾರಿತಪ್ಪಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಒಬ್ಬರೆ ನಡೆದುಕೊಂಡು ಹೋಗುತ್ತಿದ್ದ ಆಸ್ಮಾ ಅವರನ್ನು ಕಂಡ ವೈಟ್ ಡೌಸ್ ನಿರ್ಗತಿಕರ ಆಶ್ರಯ ತಾಣದ ಸಂಸ್ಥಾಪಕಿ ಕೊರಿನ್ ರಸ್ಕಿನಾ ರಕ್ಷಣೆ ಮಾಡಿದ್ದಾರೆ. 

   ಆಸ್ಮಾರನ್ನು ರಕ್ಷಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ, ಆಸ್ಮಾ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚಲು ಕೊರಿನ್ ರಸ್ಕಿನಾ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಕುಟಂಬದವರ ಸುಳಿವು ಸಿಗಲಿಲ್ಲ. ಆಸ್ಮಾ ಅವರು ಇತ್ತೀಚೆಗೆ ಮುಂಬೈನ ಬೈಕಲಾದ ತವರು ಮನೆಯ ವಿಳಾಸ ನೀಡಿದ್ದರು. ವಿಳಾಸದ ಆಧಾರದ ಮೇಲೆ ಕೊರಿನ್ ರಸ್ಕಿನಾ ಅವರು ಬೈಕಲಾ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾರೆ.

   ಪೊಲೀಸರು ಈ ವಿಚಾರವನ್ನು ಆಸ್ಮಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೆ ಆಸ್ಮಾ ಕುಟುಂಬಸ್ಥರು ವೈಟ್ ಡೌಸ್ ಸಂಸ್ಥೆಗೆ ಸಂಪರ್ಕಿಸಿ, ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಬರೋಬರಿ ಐದು ವರ್ಷದ ಹಿಂದೆ ಕಳೆದುಕೊಂಡ ತಾಯಿಯನ್ನು ಮತ್ತೆ ಕಂಡು ಮಕ್ಕಳು ಕಣ್ಣೀರು ಹಾಕಿದರು. ಕುಟುಂಬ ಸದಸ್ಯರು ಆಸ್ಮಾರನ್ನು‌ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

Recent Articles

spot_img

Related Stories

Share via
Copy link