ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಹಿಂಪಡೆಯಲು ರಾಜ್ಯ ಸರ್ಕಾರದಿಂದ ಸಿದ್ಧತೆ :ಪ್ರಲ್ಹಾದ್​ ಜೋಶಿ

ಸಂಡೂರು

    ರಾಜ್ಯ ಕಾಂಗ್ರೆಸ್ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಗಲಭೆ ಕೋರರ ಮೇಲಿನ ಕೇಸ್ ಹಿಂಪಡೆಯಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ   ಗಂಭೀರ ಆರೋಪ ಮಾಡಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್​ನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮುಸ್ಲಿಂ ತುಷ್ಟೀಕರಣದ ರಾಜಕರಣ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

   ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಳಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದ್ದಾರೆ. 

   ರಾಜ್ಯ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಹಿಂಪಡೆಯಲು ಎಲ್ಲಾ ತಯಾರಿ ನಡೆಸಿರುವ ಬಗ್ಗೆ ತಮಗೆ ಪಕ್ಕಾ ಮಾಹಿತಿ ಬಂದಿದೆ. ತನ್ನದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೂ ಕಾಂಗ್ರೆಸ್​ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ. ಹಿಂದೂ ಸಂಘಟನೆ, ಹಿಂದೂಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

   ಕಾಂಗ್ರೆಸ್ಸಿಗರು ಮಹಾರಾಷ್ಟ್ರದಲ್ಲಿ ಖಾಲಿ ಹಾಳೆಯ ಸಂವಿಧಾನ ಪ್ರತಿ ಹಂಚಿದ್ದು, ಬುದ್ಧಿ ಭ್ರಮಣೆ ಆಗಿದೆಯೇ? ಇವರಿಗೆ ಎಂದು ಲೇವಡಿ ಮಾಡಿದರು. ಮಾತೆತ್ತಿದರೆ ಸಂವಿಧಾನ, ದಲಿತರ ಪರ ಎನ್ನುವ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ, ದಲಿತರಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.

   ನಾಗ್ಪುರದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಇದ್ದ ಕಾರ್ಯಕ್ರಮದಲ್ಲಿ ಮೊದಲ ಪುಟ ಸಂವಿಧಾನ ಗ್ರಂಥದ ಚಿತ್ರ, ಒಳಗೆಲ್ಲ ಖಾಲಿ ಪುಟಗಳಿರುವ ಪ್ರತಿಗಳನ್ನು ಹಂಚಿದೆ. ಇದು ಸಂವಿಧಾನದ ಮೇಲೆ ಹಾಗೂ ಅಂಬೇಡ್ಕರ್, ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ಇರುವ ಭಾವನೆ, ಕಿಮ್ಮತ್ತು ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

  ರಾಜ್ಯದಲ್ಲಿ ನಿರ್ಬಂಧಿತ ಸೆಮಿ(ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ)ದ ಅವತಾರಗಳು ಮತ್ತೆ ಮರುಕಳಿಸುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದರ 175 ಕೇಸ್ ಗಳನ್ನು ಪಡೆದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ 2013-18ರ ಅವಧಿಯಲ್ಲಿ ಕೋರ್ಟ್ ಸಹ ಸೆಮಿಗೆ ನಿರ್ಬಂಧ ಹೇರಿತು. ಆದರೆ ಎಸ್​ಡಿಪಿಐ, ಪಿಎಫ್​ಐ ಕಾರ್ಯಚಟುವಟಿಕೆಗಳು ಸೆಮಿಯ ಅವತಾರ ಎಂಬಂತೆ ನಡೆಯುತ್ತಿದ್ದು, ಈಗ ಮತ್ತೆ ಚುರುಕಾಗಿದೆ. ಕಾಂಗ್ರೆಸ್ ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ. 

  ಸುಳ್ಳು ಹೇಳುವುದದರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು. ಅಷ್ಟು ಸತ್ಯವಂತರಾಗಿದ್ದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ರಾಜ್ಯ ಸರ್ಕಾರದ್ದು ಎಲ್ಲಾ ಬೋಗಸ್ ಗ್ಯಾರೆಂಟಿಗಳು ಎಂದು ಆರೋಪಿಸಿದ್ದಾರೆ.

  ಈ ಸರ್ಕಾರ ಒಂದೆಡೆ ಕೊಟ್ಟು, ಮತ್ತೊಂದಲ್ಲಿ ಅದರ ಹತ್ತರಷ್ಟು ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರೈತರ ಪಹಣಿ ಶುಲ್ಕ ಹೀಗೆ ಎಲ್ಲದರಲ್ಲೂ ಬೆಲೆ ಏರಿಕೆ ಹೊರೆ ಹೊರಿಸಿದೆ ಎಂದು ಆರೋಪಿಸಿದರು. 

  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲೆಷ್ಟು ಜನರಿಗೆ ತಲುಪಿವೆ? ಅದರ ಆದಾಯದ ಮೂಲ, ವೆಚ್ಚ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಲಿ ಮೊದಲು ಎಂದು ಸಚಿವ ಜೋಶಿ ಆಗ್ರಹಿಸಿದರು.

  ಗೃಹಲಕ್ಷ್ಮಿ ಹಣ ಎಷ್ಟು ಜನರಿಗೆ ತಲುಪಿದೆ? ಇದರಲ್ಲಿ ತಾರತಮ್ಯ ತೋರಲಾಗಿದೆ. ಶಕ್ತಿ ಯೋಜನೆ ಕೊಟ್ಟರೆ ಪೆಟ್ರೋಲ್, ಡೀಸೆಲ್, ಪ್ರಯಾಣ ದರ ಹೆಚ್ಚಿಸಿದ್ದಾರೆ. ಫ್ರೀ ವಿದ್ಯುತ್ ಘೋಷಿಸಿದಂತೆ ಇಲ್ಲ. ಅಲ್ಲದೇ, 3 ರೂ. ಯುನಿಟ್ ಇದ್ದ ವಿದ್ಯುತ್ ಶುಲ್ಕ ಈಗ 7.50 ರೂ.ಗೆ ಹೆಚ್ಚಿಸಿದ್ದಾರೆ. 

   ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. ಮೂಡಾ, ವಾಲ್ಮೀಕಿ ಹಗರಣ, ಬೋಗಸ್ ಗ್ಯರೆಂಟಿಗಳಿಂದಾಗಿ ಸಿಎಮ ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 70-80 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಅದನ್ನು ಸರಿದೂಗಿಸಲು ಹೆಣಗಾಡುತ್ತಿದೆ ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap