ಬೆಂಗಳೂರು:
ತೆರಿಗೆ ಬಾಕಿ ಇರುವ ವಸತಿಯೇತರ ಕಟ್ಟಡಗಳ ಬಂದ್ ಮಾಡಿ, ಆಸ್ತಿ ತೆರಿಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೂಚನೆ ನೀಡಿದೆ.
ಬಿಬಿಎಂಪಿ ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿ ‘ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ’ ಶುಕ್ರವಾರ ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಪರಿಶೀಲನೆ ನಡೆಸಿದರು. ಇದೇ ವೇಳೆ ಲಗ್ಗೆರೆಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳ ತ್ವರಿತವಾಗಿ ಆಸ್ತ ಮಾರಾಟ ಅಥವಾ ಹಸ್ತಾಂತರ ಮಾಡುವುದಿದ್ದರೆ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಕೂಡಲೇ ಇ-ಖಾತಾ ಪಡೆಯಬಹುದು. ಇ-ಖಾತಾ ಕಡ್ಡಾಯ ಗೊಳಿಸಿಲ್ಲ. ಭೂಪರಿವರ್ತನೆಯನ್ನು ಸುಲಭಗೊಳಿಸಲು ಅಧಿಕಾರಿಗಳು ಇ-ಖಾತೆ ಪ್ರಕ್ರಿಯೆಗಳನ್ನು ಸರಳೀಕರಿಸಬೇಕು ಎಂದು ಹೇಳಿದರು.
ಬಳಿಕ ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ 950 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು, ವೇಗವಾಗಿ ಕಾಮಗಾರಿ ನಡೆಸಬೇಕು. ಪ್ರತಿವಾರ ಕಾಮಗಾರಿಯ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 1 ತಿಂಗಳಿಂದ ವೈಟ್ ಟಾಪಿಂಗ್ ಕಾಮಾಗರಿ ಪ್ರಾರಂಭಿಸಲಾಗಿದೆ. ಒಂದು ಬದಿಯ ರಸ್ತೆಯನ್ನು ಸಂಪೂರ್ಣ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ.
ಸದರಿ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ಚೇಂಬರ್, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಗೆ ವೇಗ ನೀಡಿ, ಕಾಮಗಾರಿಯ ನಡೆಯುತ್ತಿರುವ ಬಗ್ಗೆ ಪ್ರತಿ ವಾರ ವರದಿ ನೀಡಬೇಕು. ಸರಿಯಾದ ಯೋಜನೆ ರೂಪಿಸಿಕೊಂಡು ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ನಾಗರಭಾವಿ ಕೆರೆಯ ಸುತ್ತ ಬೇಲಿ ಹಾಕುವ ಕಾಮಗಾರಿಯನ್ನೂ ಆಯುಕ್ತರು ಪರಿಶೀಲಿಸಿದರು. ಲೋಕಾಯುಕ್ತರ ನಿರ್ದೇಶನದಂತೆ ರಾಜಕಾಲುವೆಯಿಂದ ಕೊಳಚೆ ನೀರು ಬರದಂತೆ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದಲ್ಲದೆ, ಕೊಟ್ಟಿಗೆ ಪಾಳ್ಯದ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಆಯುಕ್ತರು ಪರಿಶೀಲಿಸಿದರು. ಈ ವೇಳೆ ಗ್ರಾಹಕರೊಬ್ಬರು ಶುದ್ಧ ಮತ್ತು ಗುಣಮಟ್ಟದ ಆಹಾರವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ನಂತರ ನಾಗರಭಾವಿ ಕೆರೆ ಹಾಗೂ ಮೈಸೂರು ರಸ್ತೆಯ ವೃಷಭಾವತಿ ಕಾಲುವೆ ಪಕ್ಕದಲ್ಲಿರುವ ಟ್ರಾನ್ಸ್ಫರ್ ಸ್ಟೇಷನ್ ಪರಿಶೀಲಿಸಿದರು. ಈ ದುರ್ವಾಸನೆ ತಪ್ಪಿಸಲು ಸ್ವಚ್ಛತೆ ಹೆಚ್ಚಿಸುವಂತೆ ಸೂಚನೆ ನೀಡಿದರು.