ಹರಿಹರ:
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಶಾಖಾ ಕಚೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದೆ ಶಿಷ್ಟಾಚಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ವಿರುದ್ಧ ಸೋಮವಾರ ಹರಿಹಾಯ್ದ ಬಿಜೆಪಿ ಶಾಸಕ ಬಿ.ಪಿ. ಹರೀಶ್, ಹಲ್ಲೆಗೂ ಯತ್ನಿಸಿರುವ ಘಟನೆ ನಡೆದಿದೆ.
‘ಧೂಡಾ’ ಶಾಖಾ ಕಚೇರಿ ಉದ್ಘಾಟನೆ ಇಂದು ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಧೂಡಾ ಸದಸ್ಯರು ಆಗಿರುವ ಸ್ಥಳೀಯ ಶಾಸಕ ಬಿ.ಪಿ. ಹರೀಶ್ ಅವರನ್ನು ನಗರಸಭೆ ಆಯುಕ್ತರು ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿರಲಿಲ್ಲ. ಇದರಿಂದ ಕುಪಿತಗೊಂಡ ಶಾಸಕರು, ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಗರಂ ಆದರು.
ನಾನು ಹರಿಹರ ಶಾಸಕ, ನನ್ನ ಕ್ಷೇತ್ರದಲ್ಲಿ ದೂಡಾ ಕಚೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರೇ ಬಿಟ್ಟು ಹೋಗಿದೆ. ಇದು ಪ್ರೋಟೊಕಾಲ್ ಉಲ್ಲಂಘನೆ ಅಲ್ಲವೇ..? ಯಾರನ್ನ ಮೆಚ್ಚಿಸೋಕೆ ಈ ಕೆಲಸ ಮಾಡಿದ್ದೀಯಾ..? ಅಥವಾ ಸಾಹುಕಾರನ ಮೆಚ್ಚಿಸೋಕೆ ಇಂತಹ ಕೆಲಸ ಮಾಡ್ತಿಯಾ..? (ಸಚಿವ ಎಸ್.ಎಸ್.ಮಲ್ಲಿಕಾರ್ಜುನ) ಎಂದು ತೀವ್ರ ತರಾಟೆ ತೆಗೆದುಕೊಂಡರು. ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತಿತರರು ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಸಮಾಧಾನಗೊಳ್ಳದ ಶಾಸಕರು,. ಕೆಂಡಾಮಂಡಲರಾಗಿ ಆಯಯಕ್ತ ವಿರುದ್ಧ ಕಿಡಿಕಾರಿದರು. ಥೂ ಮುಖ ತೋರಿಸಬೇಡ, ಹೋಗು ಆ ಕಡೆ. ಏಯ್ ನನಗೇ ಸರಿಯಾಗಿ ಮಾತನಾಡು ಅಂತೀಯ, ಮುಚ್ಕೊಂಡಿರು. ಯಾರ, ಸಾಹುಕಾರನ ಮೆಚ್ಚಿಸೋಕೆ ಇದನ್ನೆಲ್ಲ ಮಾಡ್ತೀಯಾ? ನೀನು ಮತ್ತೆ ಮಾತನಾಡಿದರೆ ಹುಷಾರು, ನಡಿ ಆ ಕಡೆ ಹೋಗು’ ಎಂದು ಗದರಿರುವುದು ವಿಡಿಯೋದಲ್ಲಿದೆ.
ಈ ಹಿಂದೆ ದಾವಣಗೆರೆ ದೂಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಹರಿಹರ ಅಭಿವೃದ್ಧಿ ವಿಚಾರವಾಗಿ ಶಾಸಕ ಹರೀಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ವಾಗ್ದಾಳಿ ನಡೆದಿತ್ತು. ಇದೀಗ ಹರಿಹರ ದೂಡಾ ಶಾಖಾ ಕಚೇರಿ ಉದ್ಘಾಟನೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬಿಟ್ಟಿದ್ದಕ್ಕೆ ಶಾಸಕ ಹರೀಶ್ ಕೆಂಡಾಮಂಡಲರಾಗಿದ್ದರು.