ಬೆಂಗಳೂರು :
ಸದಾ ವಾಹನಗಳ ಟ್ರಾಫಿಕ್ನಿಂದ ಗಿಜಿಗುಡುವ ಬೆಂಗಳೂರಿನ ರಸ್ತೆಗಳು ಇದೀಗ ಯಮಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ರಸ್ತೆ ಗುಂಡಿಗಳು, ಹೊಂಡಗಳಿಂದ ತುಂಬಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ. ಇತ್ತ ಜನರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಸ್ಥಿತಿಯೊಂದು ನಿರ್ಮಾಣವಾಗಿದೆ. ಹೌದು, ಮಾನ್ಯತಾ ಟೆಕ್ ಪಾರ್ಕ್ ಹತ್ತಿರದ ನಾಗವಾರ ಜಂಕ್ಷನ್ ನಲ್ಲಿ ಗುಂಡಿಗಳದ್ದೆ ಕಾರುಬಾರು ಆಗಿದ್ದು, ಸರಕು ವಾಹನವೊಂದು ಪಲ್ಟಿಯಾಗುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋದೊಂದಿಗೆ “ಬ್ರ್ಯಾಂಡ್ ಬೆಂಗಳೂರು” ಎಂಬ ಪದವು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಜನರಿಗೆ ಈಗ ಸ್ಪಷ್ಟವಾದ ತಿಳುವಳಿಕೆ ಬಂದಿದೆ. ದುರದೃಷ್ಟವಶಾತ್ ಗುಂಡಿಗಳು ಮತ್ತು ಹೊಂಡಗಳಿಂದ ಕೂಡಿದ ರಸ್ತೆಗಳಿಗೆ ಈ ಪದವು ಸಮಾನಾರ್ಥಕವಾಗಿದೆ ಎಂದು ತೋರುತ್ತಿದೆ.
ಈ ಕಳಪೆ ನಿರ್ವಹಣೆಯ ರಸ್ತೆಗಳು ದಿನನಿತ್ಯದ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದು ಮಾತ್ರವಲ್ಲ, ನಗರದಾದ್ಯಂತ ಅಪಘಾತ-ಪೀಡಿತ ವಲಯಗಳನ್ನು ಸೃಷ್ಟಿಸುತ್ತವೆ. ಇದಕ್ಕೆ ಜ್ವಲಂತ ಉದಾಹರಣೆಯೊಂದು ಇಂದು ನಾಗವಾರದಲ್ಲಿ ಸಂಭವಿಸಿದ್ದು, ರಸ್ತೆಯಲ್ಲಿ ದೊಡ್ಡದಾದ ಹೊಂಡ ಇರುವುದರಿಂದ ಸರಕು ವಾಹನವೊಂದು ಪಲ್ಟಿಯಾಗಿದೆ. ಈ ಘಟನೆಯು ವಾಹನ ಸವಾರರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತಾ ಕ್ರಮಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಆದರೆ ಬಿಬಿಎಂಪಿ ತಮ್ಮ ಸ್ಲೀಪಿಂಗ್ ಮೂಡ್ ಅನ್ನು ಬದಲಾಯಿಸುವವರೆಗೆ ಇದು ಸಾಧಿಸಲಾಗುವುದಿಲ್ಲ ಎಂದು ಬರೆಯಲಾಗಿದೆ.
ಈ ವಿಡಿಯೋದಲ್ಲಿ ರಸ್ತೆ ತುಂಬೆಲ್ಲಾ ಹೊಂಡ ಗುಂಡಿಗಳು ತುಂಬಿರುವುದನ್ನು ಕಾಣಬಹುದು. ವಾಹನ ಸವಾರರು ವಾಹನವನ್ನು ನಿಧಾನವಾಗಿ ಚಲಾಯಿಸುತ್ತಿದ್ದು, ಏಕಾಏಕಿ ಆಟೋ ಗೂಡ್ಸ್ ಕ್ಯಾರಿಯರ್ ವಾಹನವೊಂದು ಬೀಳುವುದನ್ನು ಕಾಣಬಹುದು. ಅಲ್ಲೇ ಇದ್ದ ಸವಾರರು ಶಾಕ್ ಆಗಿದ್ದಾರೆ. ಈ ವಿಡಿಯೋ 42 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಈ ದೃಶ್ಯ ನೋಡಿದ ಮೇಲೆ ಇದೇನು ರಸ್ತೆಯೋ ಅಥವಾ ಗುಂಡಿಗಳ ಸಾಮ್ರಾಜ್ಯವೋ ಎನ್ನುವ ಅನುಮಾನವೊಂದು ಶುರುವಾಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
‘ ಜನಸಾಮಾನ್ಯರಲ್ಲಿ ಪ್ರತಿ ವರ್ಷ ತೆರಿಗೆಯನ್ನು ತೆಗೆದುಕೊಳ್ಳುತ್ತಾರೆ ಆದರೆ ರಸ್ತೆಗಳು ಮಾತ್ರ ಹೊಂಡಗಳಿಂದಲೇ ತುಂಬಿದೆ’ ಎಂದಿದ್ದಾರೆ. ಇನ್ನೊಬ್ಬರು, ‘ಮನುಷ್ಯನ ಜೀವಕ್ಕೆ ಯಾವುದೇ ಬೆಲೆ ಇಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ನಾನು ಬೆಂಗಳೂರು ಸಿಟಿಯ ರಸ್ತೆಯನ್ನು ನೋಡಿದ್ದೇವೆ. ಹೊಂಡಗಳು, ಗುಂಡಿಗಳೇ ತುಂಬಿ ಹೋಗಿದೆ. ಜೀವವನ್ನು ಕೈಯಲ್ಲೇ ಹಿಡಿದು ವಾಹನ ಚಲಾಯಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.