ಉಕ್ರೇನ್‌ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಬೈಡನ್‌ ….!

ವಾಷಿಂಗ್ಟನ್:

   ಅಮೆರಿಕದ ಶಸ್ತ್ರಾಸ್ತ್ರಗಳನ್ನು ರಷ್ಯಾದ ಭೌಗೋಳಿಕ ಪ್ರದೇಶವನ್ನು ಗುರಿಯಾಗಿಸಿ ಬಳಸುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್‌ನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಬೈಡೆನ್‌ ಸರ್ಕಾರ ಉಕ್ರೇನ್‌ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ತೆರವುಗೊಳಿಸಿದೆ. ಆಮೂಲಕ ಸದ್ಯ ಶಾಂತವಾಗಿರುವ ರಷ್ಯಾ-ಉಕ್ರೇನ್‌ ಯುದ್ಧ ಮತ್ತೆ ಉಲ್ಬಣಗೊಳ್ಳುವ ಭೀತಿ ಎದುರಾಗಿದೆ.

   ಇನ್ನು ಬೈಡೆನ್‌ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಶ್ವೇತಭವನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜ.20ಕ್ಕೆ ಅಧಿಕಾರ ಸ್ವೀಕರಿಸುತ್ತಿದ್ದು, ಇದಕ್ಕೆ ಎರಡು ತಿಂಗಳು ಮುನ್ನವೇ ಬೈಡೆನ್‌ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಅದೂ ಅಲ್ಲದೇ ಕೆಲವಿ ದಿನಗಳ ಹಿಂದೆಯಷ್ಟೇ ಶಸ್ತ್ರಾಸ್ತ್ರ ನಿರ್ಬಂಧ ತೆರವುಗೊಳಿಸುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕಕ್ಕೆ ಮನವಿ ಮಾಡಿದ್ದರು.

   ಇನ್ನು ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಬೈಡೆನ್‌ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈಗಾಗಲೇ ಚುನಾವಣೆಗೂ ಮುನ್ನ ಟ್ರಂಪ್ ಉಕ್ರೇನ್‌ಗೆ ಅಮೆರಿಕದ ಆರ್ಥಿಕ ಮತ್ತು ಮಿಲಿಟರಿ ನೆರವಿನ ಪ್ರಮಾಣವನ್ನು ಟೀಕಿಸುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಉಕ್ರೇನ್‌ ಮೇಲಿನ ಶಸ್ತ್ರಾಸ್ತ್ರ ನಿರ್ಬಂದ ತೆರವುಗೊಳಿಸಿದರೆ ಉಭಯ ರಾಷ್ಟ್ರಗಳ ನಡುವಿನ ಯುದ್ಧೋನ್ಮಾದವನ್ನು ಹೆಚ್ಚಿಸಲಿದೆ ಎಂದು ರಷ್ಯಾ ಎಚ್ಚರಿಸಿದೆ.
   ಮೂಲಗಳ ಪ್ರಕಾರ 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್(ATACMS) ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ಭೀಕರ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ. ಕೆಲವು ಅಮೆರಿಕ ಅಧಿಕಾರಿಗಳು ದೀರ್ಘ-ಶ್ರೇಣಿಯ ಸ್ಟ್ರೈಕ್‌ಗಳನ್ನು ಅನುಮತಿಸುವುದರಿಂದ ಯುದ್ಧದ ಒಟ್ಟಾರೆ ಪಥವನ್ನು ಬದಲಾಯಿಸಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಒಂದೆಡೆ ಇಡೀ ಜಗತ್ತೇ ರಷ್ಯಾ-ಉಕ್ರೇನ್‌ ಶಾಂತಿ ಮಾತುಕತೆ ನಡೆಸಲಿ ಎಂದು ಬಯಸುತ್ತಿದ್ದರೆ ಮತ್ತೊಂದೆಡೆ ಬೈಡೆನ್‌ ನಿರ್ಧಾರ ಯು‍ದ್ದೋನ್ಮಾದವನ್ನು ಹೆಚ್ಚಿಸಲಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap