ಬೆಂಗಳೂರು:
ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ.) ಎದುರು ಸೋಮವಾರ ಹಾಜರಾಗಿ, ವಿಚಾರಣೆ ಎದುರಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಲೋಕಾಯುಕ್ತ ಪೊಲೀಸರು ಹಾಗೂ ಇ.ಡಿ ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರು 3ನೇ ಆರೋಪಿಯಾಗಿದ್ದಾರೆ.
ಇದರಂತೆ ಪ್ರಕರಣದ ವಿಚಾರಣೆಗೆ ಬರುವಂತೆ ಇ.ಡಿ ಅಧಿಕಾರಿಗಳು ಇತ್ತೀಚೆಗೆ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ, ಸೋಮವಾರ ಬೆಂಗಳೂರಿನ ಶಾಂತಿನಗರದಲ್ಲಿನ ಇ.ಡಿ. ಕಚೇರಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆಗೆ ಹಾಜರಾದರು. ಇ.ಡಿ. ಅಧಿಕಾರಿಗಳು ಮಧ್ಯಾಹ್ನ 2 ಗಂಟೆಯಿಂದ ಸುಮಾರು ನಾಲ್ಕು ತಾಸು ಮಲ್ಲಿಕಾರ್ಜುನ ಸ್ವಾಮಿಯವರ ವಿಚಾರಣೆ ನಡೆಸಿದರು.
ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮ ಸಹೋದರಿ ಪಾರ್ವತಿ (ಸಿದ್ದರಾಮಯ್ಯ ಅವರ ಪತ್ನಿ) ಅವರಿಗೆ ದಾನ ಕೊಟ್ಟಿದ್ದಾರೆ ಎನ್ನಲಾದ ಮೈಸೂರಿನ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.
ಕೆಸರೆ ಗ್ರಾಮದ ಅದೇ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಿಸಿತ್ತು. ಇ.ಡಿ ಅಧಿಕಾರಿಗಳು ಆ ಜಮೀನಿನ ದಾಖಲೆಪತ್ರಗಳನ್ನು ಮುಂದಿಟ್ಟು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಆ ಜಮೀನನ್ನು ಮೂಲ ಮಾಲೀಕ ದೇವರಾಜು ಅವರಿಂದ ಯಾವಾಗ ಖರೀದಿಸಲಾಗಿತ್ತು, ಹೇಗೆ ಖರೀದಿ ಮಾಡಲಾಗಿತ್ತು, ಪಾರ್ವತಿ ಅವರಿಗೆ ಜಮೀನು ದಾನ ಮಾಡಿದ್ದು ಯಾವಾಗ ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದರು.
ಈ ವೇಳೆ ದಾಖಲೆ ಪತ್ರಗಳ ಸಮೇತ ವಿಚಾರಣೆಗೆ ಹಾಜರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಅವರು ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.