ಬಹಿರಂಗವಾಗಿ ಕಾಂಗ್ರೆಸ್ ಸಂಸದನ ಹಾಡಿ ಹೊಗಳಿದ ಪ್ರೀತಂ ಗೌಡ….!

ಹಾಸನ

    ಹಾಸನದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿಗಳ ನಡುವಣ ವೈಮನಸ್ಸು ಇನ್ನೂ ನಿಂತಿಲ್ಲವೇ ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಇದಕ್ಕೆ ಪ್ರಬಲ ಕಾರಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ನೀಡಿರುವ ಹೇಳಿಕೆ. ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿತ್ರ ಪಕ್ಷ ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಎದುರಾಳಿ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಪಟೇಲ್​ರನ್ನು ಹಾಡಿಹೊಗಳಿದ್ದಾರೆ.

   ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಪ್ರೀತಂ ಗೌಡ, 2024ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ. ಅದರ ಶ್ರೇಯಸ್ಸು ಹಾಸನ ಸಂಸದ ಶ್ರೇಯಸ್​ ಪಟೇಲ್​ಗೆ ಸಲ್ಲುತ್ತದೆ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದರು.

   ಇಷ್ಟುದಿನ ಈ ಭಾಗದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ನಡೆಯುತ್ತದೆ ಎಂದರೆ, ಯಾವುದೋ ಒಂದು ಮನೆಗೆ, ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನಾನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಪಟೇಲ್​ರ ತಾತನ ಕಾಲಕ್ಕೆ ಕೊಂಡೊಯ್ದಿದೆ. ಈ ಸಂದರ್ಭದಲ್ಲಿ ಪುಟ್ಟಸ್ವಾಮಿ ಗೌಡರನ್ನು ಸ್ಮರಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.

   ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಇಡೀ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಹೋಗಿದ್ದರೆ ಹಾಸನದಲ್ಲಿ ಮಾತ್ರ ಒಡಕು ಪೂರ್ಣ ಮಾಸಿರಲಿಲ್ಲ. ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಪ್ರೀತಂ ಗೌಡ ಹೇಳಿಕೆ ನೀಡಿದ್ದರೂ ತೆರೆಯ ಮರೆಯಲ್ಲಿ ಬೇರೆಯೇ ನಡೆದಿತ್ತು. ಮುಡಾ ಹಗರಣ ವಿರೋಧಿಸಿ ಬಿಜೆಪಿ, ಜೆಡಿಎಸ್ ನಡೆಸಿದ ಪಾದಯಾತ್ರೆ ಸಂದರ್ಭದಲ್ಲಿಯೂ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಪ್ರೀತಂ ಗೌಡ ನಡುವಣ ಮುನಿಸು ಬಹಿರಂಗವಾಗಿತ್ತು. ನಂತರ ಬಿಜೆಪಿ ವರಿಷ್ಠರು ಅದಕ್ಕೆ ತೇಪೆ ಹಚ್ಚಿದ್ದರು.

ಇದೀಗ ಮತ್ತೆ ಪ್ರೀತಂ ಗೌಡ ಮೈತ್ರಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಎದುರಾಳಿ ಪಕ್ಷದ ಸಂಸದನನ್ನು ಬಹಿರಂಗವಾಗಿ ಹಾಡಿ ಹೊಗಳಿರುವುದು ಕುತೂಹಲ ಮೂಡಿಸಿದೆ.

Recent Articles

spot_img

Related Stories

Share via
Copy link