ಹುಬ್ಬಳ್ಳಿ:
ಶಿವಮೊಗ್ಗದಲ್ಲಿ ಮಗನೊಬ್ಬ ಸುತ್ತಿಗೆಯಲ್ಲಿ ಹೊಡೆದು ತಂದೆಯನ್ನೇ ಕೊಂದ ಘಟನೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿಯೂ ಅಂತಹುದೇ ಘೋರ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಲೆ ಮಾಡಿದ ಬಳಿಕ ಪತ್ನಿಯೊಂದಿಗೆ ಪುತ್ರ ಪರಾರಿಯಾಗಿದ್ದಾನೆ.
ಹಳೇ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ. ತಂದೆ ಮಗನ ನಡುವೆ ಆಸ್ತಿ ವಿಚಾರವಾಗಿ ನ. 19ರಂದು ಗಲಾಟೆಯಾಗಿತ್ತು ಎನ್ನಲಾಗಿದೆ. ಇಂದು ಕುಡಿದು ಬಂದ ಮಗ ಏಕಾಏಕಿ ತಂದೆಯನ್ನೇ ಮನಬಂದಂತೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನಾಗರಾಜ್ (77) ಕೊಲೆಯಾದ ತಂದೆ. ಅಣ್ಣಪ್ಪ ತಂದೆಯನ್ನೇ ಕೊಂದ ಮಗ. ಕಂಠಪೂರ್ತಿ ಕುಡಿದು ಬಂದಿದ್ದ ಅಣ್ಣಪ್ಪ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಮಗ ಅಣ್ಣಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಣ್ಣಪ್ಪ ಪತ್ನಿ ಜತೆ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.








