ಮುಡಾ ಹಗರಣ : ಲೋಕಾಗೆ ಸಾಕ್ಷ್ಯ ಹಸ್ತಾಂತರಿಸಿದ ಇಡಿ…!

ಬೆಂಗಳೂರು

     ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರಿಗೆ ಉರುಳಾಗಿ ಪರಿಣಮಿಸಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಮಹತ್ವದ ತಿರುವು ಪಡೆದುಕೊಂಡಿದೆ. ಮುಡಾದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ  ಅವರಿಗೆ ಹಸ್ತಾಂತರಿಸಿರುವ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಹಲವು ಪುರಾವೆಗಳನ್ನು ಜಾರಿ ನಿರ್ದೇಶನಾಲಯ  ಪತ್ತೆ ಮಾಡಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

 

   ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್​ಜಿ ದಿನೇಶ್​ ಕುಮಾರ್ ಅಲಿಯಾಸ್​ ಕುಮಾರ್​ ಅನಾವಶ್ಯಕ ಪ್ರಭಾವವನ್ನು ಬೀರಿದ್ದಾರೆ. ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ಹಂಚಲಾಗಿದೆ. ಈ ಅಕ್ರಮ ಹಂಚಿಕೆಯ ಫಲಾನುಭವಿಗಳು ರಿಯಲ್​ ಎಸ್ಟೇಟ್​ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದುಬಂದಿದೆ.

   ಪಾರ್ವತಿಯವರಿಗೆ ನಿವೇಶನ ಸಿಕ್ಕಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು. ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಮುಡಾದಿಂದ ಕೆಲವೊಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ ಎಂದು ಇಡಿ ತನಿಖೆಯಲ್ಲಿ ಪತ್ತೆಹಚ್ಚಿದೆ.

   ಕೃಷಿ ಜಮೀನು ಎಂದು ತೋರಿಸಿ ಆ ಜಾಗವನ್ನು ಕೊಂಡುಕೊಂಡಿದ್ದಾರೆ. ಜಮೀನು ಮಾಲೀಕ ಮಾರುವ ಮುನ್ನವೇ ಮುಡಾ ಸೈಟ್​ ಪಡೆದಿದ್ದಾರೆ. ಪಾರ್ವತಿ ಅವರಿಗೆ ನಿವೇಶನವನ್ನು ಸಂಬಂಧಿಸಿದ ವಿಭಾಗ ಹಂಚಿಕೆ ಮಾಡಿಲ್ಲ. ಮುಡಾ ಆಯುಕ್ತರಾಗಿದ್ದ ನಟೇಶ್​ ಅವರು ಸ್ವ ಇಚ್ಛೆಯಿಂದ ಹಂಚಿದ್ದಾರೆ. ಪಾರ್ವತಿ ಅವರಿಗೆ ಯಾವ ಭಾಗದ ನಿವೇಶನ ನೀಡಬೇಕು ಎಂದು ಮುಡಾ ಆಯುಕ್ತರೇ ಆಯ್ಕೆಯನ್ನು ಮಾಡಿ, ಹಂಚಿಕೆ ಮಾಡಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದು ಬಂದಿದೆ.

Recent Articles

spot_img

Related Stories

Share via
Copy link