ವಾರಣಾಸಿ:
ಮಸೀದಿಯೊಂದರ ಸಮೀಪದಲ್ಲೇ ಇರುವ ಉದಯ ಪ್ರತಾಪ್ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಪೊಲೀಸರು ಡಿ. 5ರಂದು ಪೊಲೀಸರು ಕಾಲೇಜಿನ ಕ್ಯಾಂಪಸ್ಸಿಗೆ ಸೂಕ್ತ ಗುರುತು ಪತ್ರವನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರಗಿನ ವ್ಯಕ್ತಿಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಪೊಲೀಸರ ಈ ಕ್ರಮ ಮಂಗಳವಾರ (ಡಿ. 3)ದ ಅಹಿತಕರ ಘಟನೆಯ ಬಳಿಕ ಹೊರಬಿದ್ದಿದೆ. ಡಿ. 3ರಂದು ಕಾಲೇಜು ಸಮೀಪದ ಮಸೀದಿಯಲ್ಲಿ ನಮಾಝ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹನುಮಾನ್ ಚಾಲೀಸ ಪಠಿಸುವ ಮೂಲಕ ಸುದ್ದಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಾಲೇಜಿನ ವಿದ್ಯಾರ್ಥಿ ನಾಯಕ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ‘ಪೊಲೀಸರು ಈಗಾಗಲೇ ಕಾಲೇಜು ಗೇಟ್ ಬಳಿ ಗಸ್ತಿನಲ್ಲಿದ್ದು, ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಐಡಿ ಕಾರ್ಡ್ ತಪಾಸಣೆ ನಡೆಸುತ್ತಿದ್ದಾರೆ. ಹಾಗೂ ವಿದ್ಯಾರ್ಥಿಗಳ ಒಂದು ತಂಡವೂ ಸಹ ಕಾಲೇಜು ಗೇಟ್ ಬಳಿ ನಿಗಾ ವಹಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ಯಾರೂ ಸಹ ಇಲ್ಲಿಗೆ ನಮಾಝ್ ಸಲ್ಲಿಸಲು ಬಂದಿಲ್ಲ ಹಾಗೂ ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸಂದರ್ಭದಲ್ಲಿ ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ವಿದ್ಯಾರ್ಥಿ ನಾಯಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ವಿದ್ಯಾರ್ಥಿಗಳು ‘ವಿದ್ಯಾರ್ಥಿ ನ್ಯಾಯಾಲಯ’ವನ್ನು ರಚಿಸಿಕೊಂಡಿದ್ದು, 11 ಅಂಶಗಳ ಪತ್ರವನ್ನು ಉತ್ತರಪ್ರದೇಶದ ವಕ್ಫ್ ಬೋರ್ಡ್ ಗೆ ಕಳುಹಿಸಿ, ಈ ಮಸೀದಿಯ ಸ್ಥಿತಿಗತಿ ಹಾಗೂ ಇದರ ಮಾಲಕತ್ವದ ಮಾಹಿತಿಯನ್ನು 15 ದಿನಗಳೊಳಗೆ ನೀಡುವಂತೆ ಇದರಲ್ಲಿ ಆಗ್ರಹಿಸಲಾಗಿದೆ.
ಇನ್ನು, ಅಂಜುಮಾನ್ ಇಂತೆಜಾಮಿಯಾ ಮಸೀದಿ ಮಂಡಳಿಯ ಜಂಟಿ ಕಾರ್ಯದರ್ಶಿ ಮಹಮ್ಮದ್ ಯಾಸಿನ್ ಉತ್ತರಪ್ರದೇಶದ ವಕ್ಫ್ ಬೋರ್ಡ್ಗೆ ಪ್ರತ್ಯೇಕ ಪತ್ರವೊಂದನ್ನು ಬರೆದಿದ್ದು, ಈ ಮಸೀದಿಯ ಸ್ಥಿತಿಗತಿಯನ್ನು ತಕ್ಷಣವೇ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ .‘ಉತ್ತರಪ್ರದೇಶ ಸೆಂಟ್ರಕ್ ವಕ್ಫ್ ಬೋರ್ಡ್ ಈ ನೋಟೀಸ್ 2018ರ ನೋಟಿಸಿನಲ್ಲಿ ಈ ಮಸೀದಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿತ್ತು, ಆದರೆ ಇದನ್ನು ಜನವರಿ 2021ರಂದು ರದ್ದುಪಡಿಸಲಾಗಿದೆ ಹಾಗಾಗಿ ಈಗ ವಿವಾದ ಎಬ್ಬಿಸುವುದರಲ್ಲಿ ಯಾವುದೇ ಕಾರಣಗಳಿಲ್ಲ ಎಂದು ಬೋರ್ಡ್ ಸ್ಪಷ್ಟನೆ ನೀಡಿದೆ’ ಎಂದು ಯಾಸಿನ್ ಹೇಳಿದ್ದಾರೆ.
ಹೊರಗಡೆಯ ವ್ಯಕ್ತಿಗಳು ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು ಮತ್ತು ಕಾಲೇಜು ಕ್ಯಾಂಪಸ್ ಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಿದ್ದರು.ಕಾಲೇಜು ಆಡಳಿತ ಮಂಡಳಿಯವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮನ್ನು ಸಂಪರ್ಕಿಸಿ ಕಾಲೇಜಿನ ಪ್ರವೇಶ ದ್ವಾರದ ಬಗ್ಗೆ ಮಾತನಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತು ಈ ಮೂಲಕ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ವಿವಾದಗಳುಂಟಾಗದ ರೀತಿಯಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.