2024ರಲ್ಲಿ ಭಾರತದಲ್ಲಾದ ರೈಲ್ವೆ ದುರಂತಗಳು …..!

ತುಮಕೂರು :

     ಈ ವರ್ಷ ಕೂಡಾ ಒಳ್ಳೊಳ್ಳೆಯ ವಿಷಯಗಳ ಜೊತೆ ಜೊತೆಗೆ ರಸ್ತೆ ಅಪಘಾತ ರೈಲು ಅಪಘಾತಗಳು, ಪ್ರಾಕೃತಿಕ ವಿಕೋಪಗಳಂತಹ ಕೆಟ್ಟ ಘಟನೆಗಳು ಕೂಡಾ ನಡೆದಿವೆ. ಅದರಲ್ಲೂ ಈ ವರ್ಷವಂತೂ ಬೆಚ್ಚಿ ಬೀಳಿಸುವಂತಹ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಮಾಹಿತಿಗಳ ಪ್ರಕಾರ 2024 ರ ವರ್ಷದಲ್ಲಿ ಭಾರತದಾದ್ಯಂತ ಹಲವಾರು ರೈಲು ಅಪಘಾತಗಳು ಸಂಭವಿಸಿವೆ.

     “ನವೆಂಬರ್‌ 26 ರ ವರೆಗೆ ಒಟ್ಟು 29 ಪ್ರಮುಖ ರೈಲು ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 17 ಪ್ರಯಾಣಿಕರು ಜೀವವನ್ನು ಕಳೆದುಕೊಂಡರೆ, ಸುಮಾರು 71 ಜನರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷ, ಹಳಿ ತಪ್ಪಿಸುವುದರಿಂದ ಹಿಡಿದು ಪರಸ್ಪರ ರೈಲು ಡಿಕ್ಕಿ ಸೇರಿದಂತೆ ವಿವಿಧ ಕಾರಣಗಳಿಂದ ಈ ಎಲ್ಲಾ ಅಪಘಾತಗಳು ಸಂಭವಿಸಿವೆ” ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯ ಸಭೆಯಲ್ಲಿ ವರದಿ ಸಲ್ಲಿಸಿದ್ದಾರೆ. ಹಾಗಾದರೆ ಈ ವರ್ಷ ಯಾವೆಲ್ಲಾ ಪ್ರಮುಖ ರೈಲು ಅಪಘಾತಗಳು ಸಂಭವಿಸಿದೆ ಎಂಬುದನ್ನು ನೋಡೋಣ.

     ಜಾರ್ಖಾಂಡ್‌ನ ಜಮ್ತಾರಾ ಜಿಲ್ಲೆಯ ಕಲಝಾರಿಯ ಬಳಿ ಫೆಬ್ರವರಿ 28 ರಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಇದು ಈ ವರ್ಷ ನಡೆದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. 

     ರಾಜಸ್ಥಾನದ ಅಜ್ಮೀರ್ ಬಳಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ ಘಟನೆ ಮಾರ್ಚ್‌ 18 ರಂದು ಸಂಭವಿಸಿತ್ತು. ಅದೃಷ್ಟವಶಾತ್ ಈ ಒಂದು ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. 

      ಜೂನ್‌ 17 ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಅಗರ್ತಲಾ ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಒಂದು ಅಪಘಾತದಲ್ಲಿ ಸುಮಾರು 15 ಜನರು ಮೃತಪಟ್ಟಿದ್ದು, 41 ಜನರು ಗಾಯಗೊಂಡಿದ್ದರು. ಈ ಅಪಘಾತ ಕೂಡಾ ಈ ವರ್ಷ ನಡೆದ ಪ್ರಮುಖ ರೈಲು ಅಘಾತಗಳಲ್ಲಿ ಒಂದಾಗಿದೆದೆ. 

     ಪಂಜಾಬ್‌ನಲ್ಲಿ ಸಿರ್ಹಿಂದ್‌ನ ಮಾಧೋಪುರ ಬಳಿ ಜೂನ್‌ 2 ರಂದು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಂತಹ ಘಟನೆ ನಡೆದಿದ್ದು, ಈ ಒಂದು ಅಪಘಾತದಲ್ಲಿ ಆ ರೈಲುಗಳಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಇಬ್ಬರು ಲೋಕೋ ಪೈಲಟ್‌ಗಳಿಗೆ ಗಾಯಗಳಾಗಿದ್ದವು. 

     ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ದಿಬ್ರುಗಢ-ಚಂಡೀಗಢ ಎಕ್ಸ್‌ಪ್ರೆಸ್ ಹಳಿತಪ್ಪಿದಂತಹ ಘಟನೆ ಜುಲೈ 18 ರಂದು ನಡೆದಿತ್ತು. ಈ ದುರಂತದಲ್ಲಿ ನಾಲ್ಕು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು 31 ಮಂದಿ ಗಾಯಗೊಂಡಿದ್ದರು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತಗಳಲ್ಲಿ ಒಂದಾಗಿದೆ. 

     ಹೌರಾ-ಮುಂಬೈ ಪ್ಯಾಸೆಂಜರ್‌ ರೈಲು ಹಳಿ ತಪ್ಪಿದ ಘಟನೆ ಜಾರ್ಖಾಂಡ್‌ನ ಛಕ್ರಾಧರ್‌ಪುರ್‌ ವಿಭಾಗದ ಬಳಿ ಜುಲೈ 30 ರಂದು ನಡೆದಿತ್ತು. ಪ್ಯಾಸೆಂಜರ್‌ ರೈಲಿನ 18 ಬೋಗಿಗಳು ಹಳಿ ತಪ್ಪಿ ತಪ್ಪಿದ್ದ ಪರಿಣಾಮ 2 ಪ್ರಯಾಣಿಕರು ಮೃತಪಟ್ಟು, ಸುಮಾರು 20 ಗಾಯಗೊಂಡಿದ್ದರು. 

    ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸಿದ ಘಟನೆ ಅಕ್ಟೋಬರ್‌ 11 ರಂದು ನಡೆದಿತ್ತು. ಅದೃಷ್ಟವಶಾತ್‌ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಹಲವು ಪ್ರಯಾಣಿಕರಿಗೆ ಸಣ್ಣಪಟ್ಟ ಗಾಯಗಳಾಗಿದ್ದವು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತವಾಗಿದೆ.

Recent Articles

spot_img

Related Stories

Share via
Copy link