ಮಂಗಳೂರು:
ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 150 ಕೋಟಿ ರೂ. ಆಮಿಷವೊಡ್ಡಿದ್ದರು. ಆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಬಿಐ ತನಿಖೆ ಮಾಡಿಸಲಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಕ್ಕೆ ಸ್ವತಃ ಮಾಣಿಪ್ಪಾಡಿ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, 2012-13ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ರೆಡಿ ಮಾಡುತ್ತಿದ್ದಾಗ ವಿಜಯೇಂದ್ರ ಏನೂ ಆಗಿರಲಿಲ್ಲ. ಯಡಿಯೂರಪ್ಪ ಪುತ್ರ ಅಷ್ಟೇ ಆಗಿದ್ದರು. 2019ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ವಕ್ಫ್ ಆಸ್ತಿ ಕುರಿತ ವರದಿ ಜಾರಿಗೊಳಿಸಬೇಕೆಂದು ಆಗ್ರಹ ಮಾಡಿದ್ದೆ. ಈ ವಿಷಯದಲ್ಲಿ ಬಿಜೆಪಿ ನಾಯಕರ ಬಗ್ಗೆ ಕೋಪಗೊಂಡಿದ್ದೆ. ಆಗ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ನನ್ನ ಜೊತೆಗೆ ಮಾತುಕತೆ ನಡೆಸಿದ್ದು ಹೌದು. ಆದರೆ, ಯಾವುದೇ ಆಮಿಷವೊಡ್ಡಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ವಿಜಯೇಂದ್ರ ಅವರಲ್ಲ ಬದಲಿಗೆ ವರದಿ ಬಹಿರಂಗ ಮಾಡದಂತೆ ಕಾಂಗ್ರೆಸಿಗರೇ ನನಗೆ ಸಾವಿರ ಕೋಟಿ ಆಫರ್ ಮಾಡಿದ್ದರು. ಏಕೆಂದರೆ, ವಕ್ಪ್ ಆಸ್ತಿ ಹಗರಣದಲ್ಲಿ ಕಾಂಗ್ರೆಸ್ ನಾಯಕರದ್ದೇ ಹೆಸರಿವೆ. ವರದಿ ಜಾರಿ ಮಾಡುತ್ತಿದ್ದರೆ ಕಾಂಗ್ರೆಸ್ಸಿಗೇ ಮುಳುವಾಗುತ್ತಿತ್ತು. ಹಲವು ನಾಯಕರು ಜೈಲಿಗೆ ಹೋಗುವ ಸ್ಥಿತಿ ಬರುತ್ತಿತ್ತು. ಇದರಿಂದ ಬಚಾವ್ ಆಗಲು ನನಗೆ ಬಹಳಷ್ಟು ಆಮಿಷ ಒಡ್ಡಿದ್ದರು. 150 ಅಲ್ಲ, ಸಾವಿರಾರು ಕೋಟಿ ಕೊಡುವುದಕ್ಕೂ ರೆಡಿ ಇದ್ದರು. ಅಮೆರಿಕದಲ್ಲಿ ಹೋಗಿ ಸೆಟ್ಲ್ ಆಗುವುದಿದ್ದರೂ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಆದರೆ, ನಾನು ಎಲ್ಲವನ್ನೂ ನಿರಾಕರಿಸಿದ್ದೇನೆ. ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದೇನೆ. ಇದರ ಬಗ್ಗೆ ಪ್ರಧಾನಿಯವರಿಗೂ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ವರದಿಯಲ್ಲಿ ಹೆಸರು ಬಂದವರು ಪ್ರಕರಣ ಮುಚ್ಚಿ ಹಾಕಲು ಆಫರ್ ನೀಡಲು ಬಂದಿದ್ದರು. ಅದು ಬಿಟ್ಟರೆ ಬಿಜೆಪಿ ಕಡೆಯಿಂದ ಆಫರ್ ಆಮಿಷ ಬಂದಿಲ್ಲ. ವರದಿ ಜಾರಿಗೊಂಡಿದ್ದರೆ ಕಾಂಗ್ರೆಸ್ಸಿನ ದೊಡ್ಡ ಕುಳಗಳೇ ಸಿಕ್ಕಿ ಬೀಳುತ್ತಿದ್ದರು. ಈಗ ಸಿದ್ದರಾಮಯ್ಯ 1.60 ಲಕ್ಷ ಎಕರೆ ಆಸ್ತಿಗೆ ನೋಟಿಸ್ ಕೊಟ್ಟಿದ್ದು ಒಂದು ರೀತಿಯ ಬೋಗಸ್. ನಾವು ಕೊಟ್ಟ ವರದಿಯಲ್ಲಿ 27 ಸಾವಿರ ಎಕರೆ ವಕ್ಪ್ ಆಸ್ತಿ ಕಬಳಿಕೆ ಬಗ್ಗೆ ದಾಖಲೆ ಇದೆ. ಅದು ಬಿಟ್ಟು ಸಿದ್ದರಾಮಯ್ಯ ಒಂದೂವರೆ ಲಕ್ಷ ಎಕರೆಗೆ ನೋಟಿಸ್ ಕೊಟ್ಟಿದ್ದು ಹೇಗೆ? ಅಷ್ಟೊಂದು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಆಸ್ತಿ ಕಬಳಿಸಿದ ಪ್ರಭಾವಿಗಳಿಗೆ ನೋಟಿಸ್ ಕೊಟ್ಟಿದ್ದಾರೆಯೇ. ಇವರಿಗೆ ವಕ್ಪ್ ಆಸ್ತಿ ತನಿಖೆ ಮಾಡಬೇಕೆಂಬ ಆಸಕ್ತಿ ಇಲ್ಲ, ಹೀಗೆ ಆರೋಪ ಮಾಡುತ್ತಾರೆ ಬಿಟ್ಟರೆ ತನಿಖೆ ಮಾಡಿಸುವುದಿಲ್ಲ. ಹಾಗಿದ್ದರೆ ಸಿಬಿಐ ತನಿಖೆಗೆ ಕೊಡಲಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ನನ್ನ ವರದಿ ಅನುಷ್ಠಾನಕ್ಕಾಗಿ ಈಗಲೂ ಹೋರಾಟ ಮಾಡುತ್ತಿದ್ದೇನೆ. ಈಗಲೂ ಈ ವಿಚಾರ ಹೈಕೋರ್ಟ್ ಮುಂದೆ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಕುರಿತು ಪ್ರತಿಕ್ರಿಯಿಸಿ, ನನ್ನ ವರದಿಯ ಆಧಾರದಲ್ಲಿ ವಕ್ಫ್ ಕಾಯ್ದೆಗೆ ಕೆಲವೊಂದು ತಿದ್ದುಪಡಿ ತರುವಂತೆ ನಾನೇ ಕೋರಿದ್ದೆ. ಯಾವ ರೀತಿಯಲ್ಲೂ ವಕ್ಫ್ ಆಸ್ತಿ ಕಬಳಿಕೆ ಆಗಬಾರದು ಎಂಬುದು ನನ್ನ ಉದ್ದೇಶ. ಅಲ್ಪಸಂಖ್ಯಾತರಿಗೆ ತೊಂದರೆ ಆಗದಿದ್ದರೆ, ಅವರಿಗೆ ಒಳ್ಳೆಯದಾಗುವುದಿದ್ದರೆ ಕೇಂದ್ರ ಸರ್ಕಾರ ತರುವ ಕಾಯ್ದೆ ತಿದ್ದುಪಡಿಗೆ ನನ್ನ ಸಹಮತ ಖಂಡಿತಾ ಇದೆ ಎಂದು ತಿಳಿಸಿದರು