ಬಿಜೆಪಿ ರಾಜ್ಯಾಧ್ಯಕ್ಷ : ಹೊಸ ಬಾಂಬ್‌ ಸಿಡಿಸಿದ ಕುಮಾರ್‌ ಬಂಗಾರಪ್ಪ

ಶಿವಮೊಗ್ಗ:

    ಬಿಜೆಪಿ ರಾಜ್ಯಾಧ್ಯಕ್ಷ  ಸ್ಥಾನ ಜನವರಿಯಲ್ಲಿ ಬದಲಾಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ  ಬಾಂಬ್‌ ಸಿಡಿಸಿದ್ದಾರೆ. ಜೊತೆಗೆ, ನಾನು ಕೂಡ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮನದಿಚ್ಛೆ ಹೊರಹಾಕಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ಸ್ಥಾನ ಖಾಲಿಯಾಗುವ ನಿರೀಕ್ಷೆ ಇದೆ. ನಾನು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.

     ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿಯ ಭಿನ್ನಮತದ ಬಗ್ಗೆ ಕೇಂದ್ರದ ವರಿಷ್ಠರು ಗಮನ ಹರಿಸಿದ್ದಾರೆ. ಶೀಘ್ರವಾಗಿ ತೀಕ್ಷ್ಣವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಕಳೆದ 30 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ.

    ಕಾಂಗ್ರೆಸ್ ಅಹಿಂದ ಸಂಘಟನೆಯನ್ನು ರಚಿಸಿದ್ದು, ಅದಕ್ಕೆ ಎದುರಾಗಿ ಬಿಜೆಪಿ ಒಬಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಒಬಿಸಿ ನಾಯಕರಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಒಬಿಸಿ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಬಂದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ. ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಏನು ಆಗಲಿದೆ ಕಾದು ನೋಡಬೇಕಿದೆ ಎಂದು ತಿಳಿಸಿದರು. 

   ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪವುದಿಲ್ಲ. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ   ಹೇಳಿದ್ದಾರೆ.

    ನಾನು ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮದಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ. ಭಾರತೀಯ ಜನತಾ ಪಾರ್ಟಿ ಕೂಡು ಕುಟುಂಬವಿದ್ದಂತೆ, ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಕಾರ್ಯಕ್ರಮಗಳು ನಡೆಯಬೇಕಿದೆಯೇ ಹೊರತು, ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಾಗಿಲ್ಲದಿರುವುದನ್ನು ವಿನಮ್ರತೆಯಿಂದ ಸಹೃದಯರಲ್ಲಿ ತಿಳಿಸಬಯಸುತ್ತೇನೆ ಎಂದು ಯತ್ನಾಳ್‌ ಅವರ ಬಣಕ್ಕೆ ಮನವಿ ಮಾಡಿಕೊಂಡಿದ್ದಾರೆ.

Recent Articles

spot_img

Related Stories

Share via
Copy link