ವಿಫಲ ಕೊಳವೆಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚದಿದ್ದರೆ ದಂಡ : ಸಚಿವ

ಬೆಳಗಾವಿ

    ಬೆಳಗಾವಿ ಸುರ್ವಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ  ನಡೆಯುತ್ತಿದೆ. ಅಧಿವೇಶನ ಸೋಮವಾರ  ರಾತ್ರಿ 1 ಗಂಟೆಯವರೆಗೂ ನಡೆದಿದ್ದು, ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಕೊಳವೆಬಾವಿ ಮುಚ್ಚದಿದ್ದರೆ ಜೈಲು ಮತ್ತು ದಂಡ ವಿಧಿಸುವ ತಿದ್ದುಪಡಿ ವಿಧೇಯಕ ಸೇರಿದ್ದಂತೆ ಅಧಿವೇಶನದಲ್ಲಿ ಎಂಟು ವಿಧೇಯಕಗಳನ್ನು ಅಂಗೀಕರಿಸಲಾಯಿತು. 

   ವಿಫಲ ಕೊಳವೆಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ ಅವಘಡಕ್ಕೆ ಕಾರಣರಾಗುವವರನ್ನು ಶಿಕ್ಷಿಸಲು ಸಚಿವ ಎನ್.ಎಸ್.ಬೋಸರಾಜು ಅವರು ಮಂಡಿಸಿದ, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ, ನಿವರ್ಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024 ವಿಧೇಯಕವನ್ನು ಅಂಗೀಕರಿಸಲಾಯಿತು. 

   ಹೊಸ ತಿದ್ದುಪಡಿಯಂತೆ ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡ ಕೊಳವೆಬಾವಿ ಮುಚ್ಚದ ಜಮೀನು ಮಾಲೀಕರಿಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದನ್ನು ಕೊರೆದ ಸಂಸ್ಥೆಯ ಮಾಲೀಕರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸುವ ಅಂಶ ವಿಧೇಯಕದಲ್ಲಿ ಸೇರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒನ್ ಟೈಂ ಸೆಟಲ್‌ಮೆಂಟ್ (ಒಟಿಎಸ್) ಅಡಿ ದಂಡ ಮತ್ತು ಬಡ್ಡಿ ಮನ್ನಾ ಮಾಡಿಕೊಂಡು ತೆರಿಗೆ ಪಾವತಿಸಿದ ಆಸ್ತಿಗಳ ವಿವರ ಬದಲಾವಣೆ ಹಾಗೂ ತೆರಿಗೆ ವ್ಯಾಪ್ತಿಗೆ ತರುವಂಥ ಬಿಬಿಎಂಪಿ (2ನೇ ತಿದ್ದುಪಡಿ) ವಿಧೇಯಕ 2024ಕ್ಕೆ ಅನುಮೋದಿಸಲಾಯಿತು. ಕಾಯ್ದೆ ಬಗ್ಗೆ ವಿವರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿ ಒಟಿಎಸ್ ಅಡಿ ಬಾಕಿ ತೆರಿಗೆ ಪಾವತಿಸಿದವರ ಮಾಹಿತಿಯನ್ನು ತಿದ್ದುಪಡಿ ಮಾಡುವುದು ಸೇರಿ ಮತ್ತಿತರ ಅವಕಾಶ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು. 

   ಹಣಕಾಸು ಸಂಸ್ಥೆ, ಅಧೀನ ಸಂಸ್ಥೆ ಅಥವಾ ವಸತಿ ಅಭಿವೃದ್ಧಿ ಸಹಕಾರ ಸಂಘಗಳಲ್ಲಿ ವಂಚಿಸಿರುವವರಿಂದ ವಸೂಲಿ ಮಾಡಿದ ಹಣವನ್ನು ನಿಗದಿತ ಅವಧಿಯೊಳಗೆ ಠೇವಣಿದಾರರಿಗೆ ನೀಡುವುದು, ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಅಂಶಗಳನ್ನು ಸೇರಿಸಿ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. 

   ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 12ರಿಂದ 15 ಪ್ರವಾಸಿ ತಾಣಗಳಲ್ಲಿ ರೋಪ್ ವೇ, ಕೇಬಲ್ ಕಾರ್ ನಿರ್ಮಾಣಕ್ಕೆ ಅನುಮತಿ ಹಾಗೂ ನಿರ್ವಹಣೆಯ ಮೇಲುಸ್ತುವಾರಿಗಾಗಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಗಾಗಿ ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರೋಪ್ ವೇ ವಿಧೇಯಕ 2024ನ್ನು ಅನುಮೋದಿಸಲಾಯಿತು. 

   ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿ ಹೊಸ ಪ್ರಾಧಿಕಾರ ರಚನೆಗಾಗಿ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ. ವಿಪಕ್ಷದ ಆರ್. ಅಶೋಕ್ ಸಲಹೆಯಂತೆ, ಪ್ರಾಧಿಕಾರದಲ್ಲಿ ಸ್ಥಳೀಯ ಸಂಸದರು, ಮುದ್ದೆಬಿಹಾಳ ಶಾಸಕರನ್ನು ಸೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿತು. 

   ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

Recent Articles

spot_img

Related Stories

Share via
Copy link