ಆನ್‌ಲೈನ್ ಹೂಡಿಕೆ ವಂಚನೆ ದಂಧೆ: 10 ಮಂದಿ ಬಂಧನ

ಬೆಂಗಳೂರು:

   ರಾಜಧಾನಿ ಬೆಂಗಳೂರಿನಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ದಂಧೆಯನ್ನು ಉತ್ತರ ಸಿಇಎನ್ ಪೊಲೀಸರು ಭೇದಿಸಿದ್ದು, ವಂಚಕರಿಗೆ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ ಮೂವರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ವಂಚಿಸಿದ ಹಣವನ್ನು ವಸೂಲಿ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ.

   ಬಂಧಿತ ಆರೋಪಿಗಳನ್ನು ಶ್ರೀನಿವಾಸ್ ರೆಡ್ಡಿ(43), ಆಕಾಶ್ ಜಿಎಂ(27), ಪ್ರಕಾಶ್ ಎಚ್(43), ಸುನಿಲ್ ಕುಮಾರ್(45), ಕಿಶೋರ್ ಕುಮಾರ್(29), ರವಿಶಂಕರ್(24), ಸುರೇಶ ವಿ(41) ಮತ್ತು ಬ್ಯಾಂಕ್ ಖಾತೆಯ ವಿವರ ನೀಡಿದ ಮಧುಸೂದನ ರೆಡ್ಡಿ(41), ಓಬುಲ್ ರೆಡ್ಡಿ(29) ಮತ್ತು ಸಾಯಿ ಪ್ರಜ್ವಲ್(38) ಎಂದು ಗುರುತಿಸಲಾಗಿದ್ದು, ಎಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದಾರೆ.

   ಆರೋಪಿಗಳು ಆನ್‌ಲೈನ್ ಹೂಡಿಕೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೂಡಿಕೆ ಹೆಸರಿನಲ್ಲಿ ತನಗೆ 88 ಲಕ್ಷ ರೂ. ವಂಚಿಸಲಾಗಿದೆ ಎಂದು ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಉತ್ತರ ಸಿಇಎನ್ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದರು ಮತ್ತು ಸಂತ್ರಸ್ತೆಯನ್ನು ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳಲ್ಲಿ ಒಬ್ಬನನ್ನು ಪತ್ತೆಹಚ್ಚಿ, ಬಂಧಿಸಿದ್ದಾರೆ.

   ವಿಚಾರಣೆ ನಡೆಸಿದಾಗ ವಂಚಕರು ಬಳಸುತ್ತಿದ್ದ ಕಚೇರಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ದಾಳಿ ನಡೆಸಿ ಇತರರನ್ನು ಬಂಧಿಸಿದ್ದಾರೆ.

   ಪೊಲೀಸರು ಬಂಧಿತರಿಂದ 51 ಮೊಬೈಲ್ ಫೋನ್‌ಗಳು, 27 ಡೆಬಿಟ್ ಕಾರ್ಡ್‌ಗಳು, 480 ಸಿಮ್ ಕಾರ್ಡ್‌ಗಳು, 108 ಬ್ಯಾಂಕ್ ಪಾಸ್‌ಬುಕ್‌ಗಳು, 48 ಬ್ಯಾಂಕ್ ಖಾತೆಗಳು, 42 ರಬ್ಬರ್ ಸ್ಟ್ಯಾಂಪ್‌ಗಳು ಮತ್ತು 103 ಜಿಎಸ್‌ಟಿ ಮತ್ತು ಇತರ ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ವ್ಯಕ್ತಿಗಳು ದುಬೈನ ಕಿಂಗ್‌ಪಿನ್‌ನ ಸೂಚನೆಯಂತೆ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

   ಆರೋಪಿಗಳು ಆನ್‌ಲೈನ್‌ನಲ್ಲಿ ಸ್ಟಾಕ್ ಮಾರುಕಟ್ಟೆ ಜಾಹೀರಾತುಗಳ ಮೂಲಕ ಸಂತ್ರಸ್ತರಿಗೆ ಆಮಿಷವೊಡ್ಡಿದ್ದಾರೆ ಮತ್ತು ಅವರನ್ನು BRANDWINE ಗ್ರೂಪ್ ಮತ್ತು E8 BRANDWINE ಗ್ರೂಪ್ ಮಾರ್ಕೆಟಿಂಗ್‌ನಂತಹ WhatsApp ಗುಂಪುಗಳಿಗೆ ಸೇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link