ಪಿಲಿಭಿತ್:
ಪಂಜಾಬ್’ನ ಗುರುದಾಸ್ಪುರ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ನಡೆಸಿದ ಆರೋಪ ಹೊತ್ತಿದ್ದ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್’ನಲ್ಲಿ ಹತ್ಯೆ ಮಾಡಿದ್ದಾರೆ.
ಆರೋಪಿಗಳನ್ನು ಪಂಜಾಬ್‌ನ ಗುರುದಾಸ್‌ಪುರ ನಿವಾಸಿಗಳಾದ ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್‌ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದ್ದು, ಮೂವರೂ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ನಿಷೇಧಿತ ಸಂಘಟನೆಗೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ.
ಪಂಜಾಬ್ ಪೊಲೀಸರು ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಎನ್ ಕೌಂಟರ್ ನಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಗುರುದಾಸ್‌ಪುರದ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ಗ್ರೆನೇಡ್ ದಾಳಿಯಲ್ಲಿ ಮೂವರು ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಹೇಳಿದ್ದಾರೆ.
ಎನ್‌ಕೌಂಟರ್‌ನಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿತ್ತು ತಕ್ಷಣ ಚಿಕಿತ್ಸೆಗಾಗಿ ಸಿಎಚ್‌ಸಿ ಪುರನ್‌ಪುರಕ್ಕೆ ರವಾನಿಸಲಾಗಿತ್ತು. ಮೂವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.ಮೂವರಿಂದ ಎರಡು ಎಕೆ-47 ರೈಫಲ್‌ಗಳು, ಎರಡು ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.