ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್​ಗೆ ಉಡುಗೊರೆ ನೀಡಿದ ರಜನಿಕಾಂತ್….!

ತಮಿಳುನಾಡು :

    ಭಾರತಕ್ಕೆ ಹೆಮ್ಮೆ ತಂದಿರುವ ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್​ ಅವರಿಗೆ ಈಗಾಗಲೇ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಚೆನೈನಲ್ಲಿ ನೆಲೆಸಿರುವ ಅವರನ್ನು ಕಾಲಿವುಡ್​ ಸೆಲೆಬ್ರಿಟಿಗಳು ಕೂಡ ಭೇಟಿ ಮಾಡುತ್ತಿದ್ದಾರೆ. ‘ಸೂಪರ್​ ಸ್ಟಾರ್​’ ರಜನಿಕಾಂತ್, ನಟ ಶಿವಕಾರ್ತಿಕೇಯನ್ ಮುಂತಾದವರು ಡಿ. ಗುಕೇಶ್ ಅವರನ್ನು ಭೇಟಿ ಮಾಡಿ ಬೆನ್ನು ತಟ್ಟಿದ್ದಾರೆ. ಇಂಥ ಸೆಲೆಬ್ರಿಟಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಗುಕೇಶ್​ ಅವರು ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಗುಕೇಶ್​ ಅವರಿಂದಾಗಿ ಭಾರತಕ್ಕೆ 11 ವರ್ಷಗಳ ಬಳಿಕ ಚೆಸ್ ಚಾಂಪಿಯನ್​ಶಿಪ್ ದೊರೆತಿದೆ. ಹಾಗಾಗಿ ಅವರನ್ನು ಕಂಡರೆ ಎಲ್ಲರಿಗೂ ಹೆಮ್ಮೆ. ಗುಕೇಶ್ ಅವರು ತಮ್ಮ ಪೋಷಕರ ಜೊತೆ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಜನಿಕಾಂತ್ ಅವರು ಗುಕೇಶ್​ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಲ್ಲದೇ, ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

   ‘ಸೂಪರ್​ ಸ್ಟಾರ್​ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ವಿಶೇಷ ಏನೆಂದರೆ, ಗುಕೇಶ್ ಅವರ ತಂದೆಯ ಹೆಸರು ಕೂಡ ರಜನಿಕಾಂತ್! ಅವರು ಇಎನ್​ಟಿ ಸರ್ಜನ್ ಆಗಿದ್ದಾರೆ. ಗುಕೇಶ್ ತಾಯಿ ಪದ್ಮಾವತಿ ಮೈಕ್ರೋಬಯೋಲಜಿಸ್ಟ್​ ಆಗಿದ್ದಾರೆ.

   ‘ಅಮರನ್’ ಸಿನಿಮಾದ ಯಶಸ್ಸಿನಲ್ಲಿ ಇರುವ ನಟ ಶಿವಕಾರ್ತಿಕೇಯನ್ ಅವರು ಡಿ. ಗುಕೇಶ್​ ಮತ್ತು ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ಚೆಸ್ ವಿನ್ಯಾಸ ಇರುವ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಗುಕೇಶ್​ಗೆ ಅವರು ವಾಚ್​ ಗಿಫ್ಟ್ ನೀಡಿದ್ದಾರೆ. ಈ ಫೋಟೋವನ್ನು ಕೂಡ ಗುಕೇಶ್​ ಅವರು ‘ಎಕ್ಸ್’ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.ಗುಕೇಶ್ ಅವರು ಅನೇಕ ಯುವಕರಿಗೆ ಮಾದರಿ ಆಗಿದ್ದಾರೆ. ಅಮಿತಾಭ್ ಬಚ್ಚನ್​, ಮೋಹನ್​ಲಾಲ್​, ಮಹೇಶ್ ಬಾಬು, ಮುಂತಾದ ಸೆಲೆಬ್ರಿಟಿಗಳು ಕೂಡ ಗುಕೇಶ್​ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

Recent Articles

spot_img

Related Stories

Share via
Copy link