ಬೆಂಗಳೂರು
ಹೊಸ ವರ್ಷದ ಆರಭದಲ್ಲೇ ಬೆಂಗಳೂರು ಜನರಿಗೆ ಚುಮು ಚಳಿಯ ಅನುಭವ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮೈನಡುಗಿಸುವ ಚಳಿ ಅನುಭವಕ್ಕೆ ಬರುತ್ತಿದೆ. ದಪ್ಪನೆಯ ಬೆಡ್ ಶೀಟ್ ಹೊದ್ದು ಮನೆಯಲ್ಲೇ ಮಲಗಿದರೆ ಸಾಕು ಎಂದು ಮನಸಿಗೆ ಅನಿಸವಂತೆ ಮಾಡುವಷ್ಟರ ಮಟ್ಟಿಗೆ ಚಳಿಯ ವಾತಾವರಣ ರಾಜಧಾನಿಯಲ್ಲಿ ಕಂಡು ಬರುತ್ತಿದೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಚಳಿ, ಇಬ್ಬನಿ ಪ್ರಮಾಣ ಏರಿಕೆ ಕಂಡಿದೆ.
ಮುಂದಿನ ವಾರ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗುವ ಮುನ್ಸೂಚನೆ ಕೂಡ ಇರುವುದರಿಂದ ಬೆಂಗಳೂರಿನಲ್ಲಿ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲ ತುಸು ಹೆಚ್ಚಿರಲಿದ್ದು, ಮಳೆ ಜಾಸ್ತಿ ಬಿದ್ದ ಕಾರಣ ಕೆರೆ, ನದಿ, ಅಣೆಕಟ್ಟುಗಳು ತುಂಬಿರುವುದು ಕೂಡ ವಾತಾವರಣದ ಚಳಿ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತಿದೆ.
ಚಳಿಯ ಜೊತೆಗೆ ಇಬ್ಬನಿ ಕೂಡ ಹೆಚ್ಚಾಗುವ ನಿರೀಕ್ಷೆ ಇದ್ದು, ಬೆಂಗಳೂರು ನಗರವಾಸಿಗಳು ಆರೋಗ್ಯದ ಬಗ್ಗೆ ಕೂಡ ಕಾಳಜಿವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಚಳಿ ಹೆಚ್ಚಿರುವಾಗ ದಪ್ಪನೆಯ ಹೊದಿಕೆ, ಸ್ವೆಟರ್ ಧರಿಸುವುದು ಉತ್ತಮ. ಈಗಿನ ವಾತಾವರಣದಲ್ಲಿ ನೆಗಡಿ, ಕೆಮ್ಮಿನಂತಹ ಲಕ್ಷಣ ಹೆಚ್ಚಾಗುವುದರಿಂದ ತಂಪಿನ ಆಹಾರ ಪದಾರ್ಥಗಳ ಬದಲು ಬಿಸಿ ಬಿಸಿ ಆಹಾರ ಸೇವಿಸಬೇಕು. ಜೊತೆಗೆ ಮಕ್ಕಳು, ವಯೋವೃದ್ಧರು ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ವೈದ್ಯ ಡಾ.ಸುನೀಲ್ ಕುಮಾರ್ ಸಲಹೆ ನೀಡಿದ್ದಾರೆ.
ಜನವರಿ 6ರ ಸೋಮವಾರ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 7ರ ಮಂಗಳವಾರ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 8ರ ಬುಧವಾರ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗುರುವಾರ ಹಾಗೂ ಶುಕ್ರವಾರಗಳಂದು ಸಹ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳು ಕ್ರಮವಾಗಿ 29 ಹಾಗೂ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.
ಒಟ್ಟಿನಲ್ಲಿ ಜನವರಿ ಆರಂಭದಲ್ಲೇ ಚಳಿಯ ಅಬ್ಬರ ಜೋರಾಗುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ನಗರದಲ್ಲಿ ಕನಿಷ್ಠ ತಾಪಮಾನವ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ.
