“ಪ್ಯಾರಿ ದೀದಿ ಯೋಜನೆ ” ಘೋಷಿಸಿದ ಡಿಕೆ ಶಿವಕುಮಾರ್‌ ….!

ನವದೆಹಲಿ:

    ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಆರ್ಥಿಕ ನೆರವು ನೀಡುವ ‘ಪ್ಯಾರಿ ದೀದಿ ಯೋಜನೆ’ಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸೋಮವಾರ ಘೋಷಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡ ಮಾದರಿಯಲ್ಲೇ ಈ ಯೋಜನೆ ದೆಹಲಿಯಲ್ಲಿ ಜಾರಿಯಾಗಲಿದೆ ಎಂದಿದೆ.

   ಪತ್ರಿಕಾಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ಸಚಿವ ಸಂಪುಟದ ಸಭೆಯಲ್ಲೇ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

   ‘ಇಂದು ನಾನು ಪ್ಯಾರಿ ದೀದಿ ಯೋಜನೆಗೆ ಚಾಲನೆ ನೀಡಲು ಇಲ್ಲಿಗೆ ಬಂದಿದ್ದೇನೆ. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ವಿಶ್ವಾಸವಿದೆ ಮತ್ತು ಹೊಸ ಸಚಿವ ಸಂಪುಟದ ಮೊದಲ ದಿನದಲ್ಲಿಯೇ ನಾವು ರಾಜಧಾನಿಯಲ್ಲಿರುವ ಪ್ರತಿ ಮಹಿಳೆಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವನ್ನು ನೀಡುವ ಯೋಜನೆಯನ್ನು ನಾವು ಜಾರಿಗೆ ತರುತ್ತೇವೆ’ ಎಂದು ಹೇಳಿದರು. ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್, ಪಕ್ಷದ ದೆಹಲಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಮತ್ತು ಇತರ ಹಿರಿಯ ನಾಯಕರು ಘೋಷಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಎಎಪಿ, ಹಲವು ವಿಶೇಷ ಯೋಜನೆಗಳನ್ನು ಈಗಾಗಲೇ ಘೋಷಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಕೂಡ ಇದೀಗ ಹಲವು ಘೋಷಣೆಗಳನ್ನು ಮಾಡುತ್ತಿದೆ.

Recent Articles

spot_img

Related Stories

Share via
Copy link