ಪಟಿಯಾಲ: ಶಂಭು ಗಡಿಯಲ್ಲಿ ಆತ್ಮಹತ್ಯೆಗೆ ಯತ್ನ ಆಸ್ಪತ್ರೆಯಲ್ಲಿ ರೈತ ಸಾವು

ಪಟಿಯಾಲ: 

   ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 55 ವರ್ಷದ ರೈತರೊಬ್ಬರು ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಇದು ಕಳೆದ ಮೂರು ವಾರಗಳಲ್ಲಿ ಪ್ರತಿಭಟನಾ ಸ್ಥಳದಲ್ಲಿ ನಡೆದ ಎರಡನೇ ಘಟನೆಯಾಗಿದೆ.

   ತರಣ್ ಜಿಲ್ಲೆಯ ಪಹುವಿಂಡ್‌ನವರಾದ ರೇಷಮ್ ಸಿಂಗ್ ಅವರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶಂಭು ಗಡಿಯಲ್ಲಿ ರೈತರು ಸುಮಾರು ಒಂದು ವರ್ಷದಿಂದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

   ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೇಷಮ್ ಸಿಂಗ್ ಅವರನ್ನು ತಕ್ಷಣ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಸಾವನ್ನಪ್ಪಿದರು ಎಂದು ವೈದ್ಯರು ಘೋಷಿಸಿರುವುದಾಗಿ ರೈತರು ತಿಳಿಸಿದ್ದಾರೆ. ದೀರ್ಘಕಾಲದ ಪ್ರತಿಭಟನೆಯ ಹೊರತಾಗಿಯೂ ಸಮಸ್ಯೆಗಳನ್ನು ಪರಿಹರಿಸದ ಕೇಂದ್ರ ಸರ್ಕಾರದ ವಿರುದ್ಧ ರೇಷಮ್ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದರು ಎಂದು ರೈತ ನಾಯಕ ತೇಜ್‌ವೀರ್ ಸಿಂಗ್ ಹೇಳಿದ್ದಾರೆ.ಡಿಸೆಂಬರ್ 18 ರಂದು ಶಂಭು ಗಡಿಯಲ್ಲಿ ಮತ್ತೊಬ್ಬ ರೈತ ರಂಜೋಧ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.

   ನವೆಂಬರ್ 26 ರಿಂದ ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ನಡೆಸುತ್ತಿರುವ ರೈತ ನಾಯಕ ಜಗ್ಜಿತ್ ಸಿಂಗ್ ದಲ್ಲೆವಾಲ್(70) ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ನೋಡಿ ರಂಜೋಧ್ ಸಿಂಗ್ ಸಾವಿಗೆ ಶರಣಾಗಿದ್ದರು.ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ, ರೈತರು ಕಳೆದ ವರ್ಷ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

Recent Articles

spot_img

Related Stories

Share via
Copy link