ಮುಂಬೈ:
ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಜನರಿಲ್ಲದ ರೈಲಿನ ಬೋಗಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಕೂಲಿಕಾರ್ಮಿಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಶನಿವಾರ ತಡರಾತ್ರಿ ಈ ಘಟನೆ ನಡೆದ ಬಳಿಕ ಕೂಲಿಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯವಯಸ್ಸಿನ ಮಹಿಳೆ ಮತ್ತು ಅವರ ಮಗ ಶನಿವಾರ ರಾತ್ರಿ ಬೇರೆ ನಿಲ್ದಾಣದಿಂದ ಬಾಂದ್ರಾ ಟರ್ಮಿನಸ್ಗೆ ಬಂದಿಳಿದ ನಂತರ ಮಹಿಳೆ ಫ್ಲಾಟ್ ಫಾರಂನ ಮತ್ತೊಂದು ಬದಿಯಲ್ಲಿದ್ದ ರೈಲು ಹತ್ತಿದ್ದಾರೆ. ಆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.ಆದರೆ, ಎರಡನೇ ರೈಲಿನಲ್ಲಿದ್ದ ಕೂಲಿಕಾರ್ಮಿಕನೊಬ್ಬ, ಮಹಿಳೆ ಮೇಲೆ ಅತ್ಯಾಚಾರವೆಸಗಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತದನಂತರ ಮಹಿಳೆ ಬಾಂದ್ರಾ ಜಿಆರ್ ಪಿ ಠಾಣೆ ಸಂಪರ್ಕಿಸಿದ್ದು, ದೂರು ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು ಅನೇಕ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಬಳಿಕ ಕೂಲಿಕಾರ್ಮಿಕನನ್ನು ಬಂಧಿಸಿದ್ದಾರೆ. ಬಾಂದ್ರಾ ರೈಲು ನಿಲ್ದಾಣದಲ್ಲಿ ಇಳಿದ ಬಳಿಕ ಮಹಿಳೆ ಮತ್ತೊಂದು ರೈಲನ್ನು ಯಾಕೆ ಹತ್ತಿದ್ದರು ಎಂಬುದರ ಕುರಿತು ಕಾರಣ ತಿಳಿಯಲು ಯತ್ನಿಸಲಾಗುತ್ತಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.