ನವದೆಹಲಿ:
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಕಳೆದ ವಾರ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಮಂದಿ ಸಾವಿಗೀಡಾಗಿದ್ದು, ಈ ಬಗ್ಗೆ ತಕ್ಷಣವೇ ಚರ್ಚೆ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಸಭಾಪತಿ ಅಂಗೀಕರಿಸದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸೋಮವಾರ ರಾಜ್ಯಸಭೆಯಿಂದ ಹೊರನಡೆದವು.
ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ವಿಚಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಇಂದಿನ ಕಾರ್ಯಕಲಾಪದ ಪಟ್ಟಿಯನ್ನು ಅಮಾನತುಗೊಳಿಸುವಂತೆ ಕೋರಿ ನಿಯಮ 267ರ ಅಡಿಯಲ್ಲಿ ಒಂಭತ್ತು ನೋಟಿಸ್ಗಳನ್ನು ಸ್ವೀಕರಿಸಲಾಗಿದೆ ಎಂದು ಸಭಾಪತಿ ಜಗದೀಪ್ ಧಂಖರ್ ತಿಳಿಸಿದರು.
ಕಾಂಗ್ರೆಸ್ ನಾಯಕರಾದ ಪ್ರಮೋದ್ ತಿವಾರಿ ಮತ್ತು ದಿಗ್ವಿಜಯ ಸಿಂಗ್, ಟಿಎಂಸಿಯ ಸಾಗರಿಕಾ ಘೋಷ್, ಸಮಾಜವಾದಿ ಪಕ್ಷದ ಜಾವೇದ್ ಅಲಿ ಮತ್ತು ರಾಮ್ಜಿ ಲಾಲ್ ಸುಮನ್ ಮತ್ತು ಸಿಪಿಐ ಪಕ್ಷಧ ಜಾನ್ ಬ್ರಿಟಾಸ್ ಅವರು ಮಹಾಕುಂಭ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದ್ದರು.
‘ಸಂವಿಧಾನ ಮತ್ತು ಬಿಆರ್ ಅಂಬೇಡ್ಕರ್ ಅವರಿಗೆ ಅಗೌರವ ತೋರುವ ಘಟನೆಗಳು ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ನೀಡಿದ್ದ ತಾರತಮ್ಯ ಮತ್ತು ಜಾತಿವಾದಿ ಹೇಳಿಕೆಗಳಿಗೆ’ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಒತ್ತಾಯಿಸಲಾಗಿದೆ .ನಿಯಮ 267ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ ನೋಟಿಸ್ಗಳಿಗೆ ಸಂಬಂಧಿಸಿದಂತೆ ಸಭಾಪತಿ ಧಂಖರು ಅವರು ಚರ್ಚೆಗೆ ಅವಕಾಶ ನೀಡಲಿಲ್ಲ. ಬಳಿಕ ನಿಗದಿಯಂತೆ ಶೂನ್ಯವೇಳೆ ಮುಂದುವರಿಯಿತು.
ಚರ್ಚೆಗೆ ಅವಕಾಶ ನೀಡದಿದ್ದರಿಂದ ಕಾಂಗ್ರೆಸ್, ಎಸ್ಪಿ, ಡಿಎಂಕೆ, ಎಎಪಿ, ಆರ್ಜೆಡಿ, ಸಿಪಿಐ ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದು, ಅದನ್ನು ಎತ್ತಿ ತೋರಿಸುವ ಪ್ರಯತ್ನದಲ್ಲಿ ಹಲವಾರು ಸಂಸದರು ಘೋಷಣೆಗಳನ್ನು ಕೂಗಿದರು. ನಂತರ ಸದಸ್ಯರು ಸಭಾತ್ಯಾಗ ಮಾಡಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಮಾತನಾಡಿದ ಧಂಖರ್, ರಾಜ್ಯಸಭೆಯು ದೇಶದ ಸಾಂವಿಧಾನಿಕ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಮತ್ತು ಸದನದಲ್ಲಿ ತಮ್ಮ ನಡವಳಿಕೆಗಳು ಅನುಕರಣೀಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಸದರಿಗೆ ಮನವಿ ಮಾಡಿದರು.