ಲಿಪ್‌ ಕಿಸ್‌ ಬಗ್ಗೆ ವಿಷಾದವಿಲ್ಲ : ಉದಿತ್‌ ನಾರಾಯಣ್

ಮುಂಬೈ:‌

    ಖ್ಯಾತ ಗಾಯಕ ಉದಿತ್‌ ನಾರಾಯಣ್‌ ತಮ್ಮ ಲಿಪ್‌ ಕಿಸ್‌  ವಿವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಸಂಗೀತ ಕಛೇರಿಯಲ್ಲಿ ತಮ್ಮ ಮಹಿಳಾ ಅಭಿಮಾನಿಯೊಬ್ಬರಿಗೆ ಲಿಪ್ ಕಿಸ್‌ ಮಾಡಿದ್ದ ಉದಿತ್‌ ಅದರ ಕುರಿತು ನನಗೆ ಯಾವುದೇ ವಿಷಾದವಿಲ್ಲ. ಸುಮ್ಮನೆ ವಿವಾದದ ಕಿಡಿ ಹಚ್ಚಿದ್ದಾರೆ. ಮುಂದೊಂದು ದಿನ ನಾನೂ ಲತಾಜಿಯಂತೆ  ಭಾರತ ರತ್ನ  ಪಡೆಯುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

   ಗಾಯಕ ಉದಿತ್ ನಾರಾಯಣ್ ಭಾನುವಾರ(ಫೆ.2) ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರನ್ನು ಚುಂಬಿಸಿದ ಕಾರಣಕ್ಕೆ ಭಾರೀ ಟೀಕೆಗೆ ಗುರಿಯಾದರು. ಸಂಗೀತ ಕಛೇರಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಉದಿತ್‌ ವಿರುದ್ಧ ಗರಂ ಆಗಿದ್ದರು. ಅಭಿಮಾನಿಯೊಬ್ಬಳು ಸೆಲ್ಫಿಗಾಗಿ ಹತ್ತಿರಕ್ಕೆ ಬಂದಾಗ ಗಾಯಕ ಆಕೆಯ ತುಟಿಗೆ ಮುತ್ತಿಟ್ಟಿರುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು . ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಉದಿತ್‌ ಆ ಕುರಿತು ನನಗೆ ಯಾವುದೇ ವಿಷಾದವಿಲ್ಲ ಎಂದಿದ್ದು, ಭವಿಷ್ಯದಲ್ಲಿ ಲತಾ ಮಂಗೇಶ್ಕರ್‌ ಅವರಂತೆ ಭಾರತ ರತ್ನವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.  

   ತಮ್ಮ ಜನಪ್ರಿಯ ಹಾಡುಗಳಿಂದ ಪ್ರಸಿದ್ಧಿ ಪಡೆದಿರುವ ಉದಿತ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. “ಮುಂದೊಂದು ದಿನ ಲತಾಜಿ ಅವರಂತೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸ್ವೀಕರಿಸಲು ಇಷ್ಟಪಡುತ್ತೇನೆ” ಎಂದಿದ್ದಾರೆ. 

  “ಈ ವಿವಾದಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಅಭಿಮಾನಿಗಳಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನನಾಗಿದ್ದೇನೆ. ನಾನು ಲತಾಜಿಯವರಂತೆ ಭಾರತ ರತ್ನವನ್ನು ಪಡೆಯಲು ಹಾತೊರೆಯುತ್ತಿದ್ದೇನೆ. ಅವರು ನನ್ನ ಆರಾಧ್ಯ ದೈವ. ನಾನು ಅವರಿಗೆ ಪ್ರೀತಿಪಾತ್ರನಾಗಿದ್ದೆ” ಎಂದು ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

   ತಮ್ಮ ಮೇಲಿನ ವಿವಾದವನ್ನು ಉದಿತ್‌ ನಾರಾಯಣ್‌ ತಳ್ಳಿ ಹಾಕಿದ್ದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.