ಬೆಂಗಳೂರು:
ಕಳೆದ ಕೆಲವು ತಿಂಗಳಿಂದೀಚೆಗೆ ತಾರಕಕ್ಕೇರಿದ ಬಿಜೆಪಿಯ ‘ಬಣ ಜಗಳ’ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪಿದ್ದು, ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಥಾನದಲ್ಲಿ ಮುಂದುವರೆಯಲಿದ್ದಾರೆಯೇ? ಇಲ್ಲವೆ ಭಿನ್ನಮತೀಯರ ಪಟ್ಟಿನಂತೆ ಬದಲಾಗಲಿದ್ದಾರೆಯೇ ಎಂಬುದರ ಕರಿತು ಕುತೂಹಲಗಳು ಹೆಚ್ಚಾಗತೊಡಗಿದೆ.
ಶತಾಯ ಗತಾಯ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದು ದೆಹಲಿಯಲ್ಲಿ ಬೀಡು ಬಿಟ್ಟಿರುವ ಭಿನ್ನಮತೀಯರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಧಾವಂತದಲ್ಲಿದ್ದಾರೆ. ಇತ್ತ ವಿಜಯೇಂದ್ರ ಪರವಿರುವ ನಾಯಕರು, ಭಿನ್ನಮತೀಯ ನಾಯಕರನ್ನು ಪಕ್ಷದಿಂದಲೇ ಉಚ್ಛಾಟಿಸುವಂತೆ ಆಗ್ರಹಿಸುತ್ತಿದ್ದಾರೆ. ಇಬ್ಬರ ಆಗ್ರಹಗಳ ನಡುವೆ ಹೈಕಮಾಂಡ್ ನಾಯಕರು ಯಾವ ನಿರ್ಧಾರಕ್ಕೆ ಬರಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ನಿರ್ಣಾಯಕ ಪಾತ್ರ ವಹಿಸಿದ್ದು, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ವಾದ ಸರಿಯಲ್ಲ ಎಂದು ವಿಜಯೇಂದ್ರ ಪರವಿರುವ ನಾಯಕರು ವಾದಿಸಿದ್ದಾರೆ.
ಇತ್ತ ವಿಜಯೇಂದ್ರ ಪರವಿರುವ ನಾಯಕರು, ಮೂರು ಕ್ಷೇತ್ರಗಳ ಉಪಚುನಾವಣೆಯ ಪೈಕಿ ಒಂದು ಕ್ಷೇತ್ರ ಕ್ಷೇತ್ರ ಮಾತ್ರ ಬಿಜೆಪಿಗೆ ಸೇರಿತ್ತು. ಉಳಿದ ಸ್ಥಾನಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪರವಿತ್ತು. ಹೀಗಾಗಿ ಇತರ ಸೋಲಿನ ಹೊಣೆಯನ್ನು ವಿಜಯೇಂದ್ರ ಅವರ ಮೇಲೆ ಹಾಕಬಾರದು ಎಂದು ಹೇಳಿದ್ದಾರೆ.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಜಯೇಂದ್ರ ಮತ್ತು ಅವರ ತಂದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದ್ದು, ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಒಬ್ಬ ರಾಜಕೀಯ ಅವಕಾಶವಾದಿ. ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಮತ್ತು ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಯತ್ನಾಳ್ ಈಗ ಸಾವಿರಾರು ಕೋಟಿಗಳನ್ನು ನಿಯಂತ್ರಿಸುತ್ತಾರೆ. ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಇದಕ್ಕೆ ನಿಮಗೆ ಎಲ್ಲಿಂದ ಹಣ ಬಂತು? ಅವರ ಬಂಡವಾಳ ಎಲ್ಲ ಗೊತ್ತಿದೆ ಎಂದು ಹೇಳಿದರು.
ಹಿಂದೂ ಹುಲಿ ಎಂದು ಹೇಳಿಕೊಳ್ಳುವ ನೀವು ಜೆಡಿಎಸ್ ಸೇರಿಕೊಂಡು ಟಿಪ್ಪುಸುಲ್ತಾನನ ಜನ್ಮ ದಿನಾಚರಣೆಯಂದು ಬಿರಿಯಾನಿ, ಕಬಾಬ್ ತಿಂದಿದ್ದನ್ನು ಮರೆತು ಬಿಟ್ಟಿರಾ ಎಂದು ಛೇಡಿಸಿದ್ದಾರೆ.ಸಚಿವ ಎಂ.ಬಿ.ಪಾಟೀಲ ಜತೆ ಯತ್ನಾಳ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಯತ್ನಾಳ ಮೂಲತಃ ಬಬಲೇಶ್ವರದವರು. ಆ ಕ್ಷೇತ್ರದಲ್ಲಿ ಏಕೆ ಸ್ಪರ್ಧೆ ಮಾಡುವುದಿಲ್ಲ? ಏಕೆಂದರೆ ಕಾಂಗ್ರೆಸ್ ಜತೆಗಿನ ಒಳ ಒಪ್ಪಂದವೇ ಕಾರಣ. ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ಕೊಟ್ಟಿದ್ದರೆ ಯತ್ನಾಳ ಶಾಸಕ ಆಗುತ್ತಿರಲಿಲ್ಲ. ಹಿಂದೆ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾಗ, ಯಡಿಯೂರಪ್ಪ ಅವರ ಕೈ–ಕಾಲು ಹಿಡಿದು ಪಕ್ಷಕ್ಕೆ ವಾಪಸ್ ಬಂದರು. ಅವರು ನಾಲಗೆ ಬಿಗಿ ಹಿಡಿದು ಮಾತನಾಡಬೇಕು.
ಯತ್ನಾಳ್, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಅವರನ್ನು ಮುಲಾಜಿಲ್ಲದೇ ಪಕ್ಷದಿಂದ ಉಚ್ಛಾಟಿಸಬೇಕು. ಮೂರು–ನಾಲ್ಕು ಜನ ಸೇರಿಕೊಂಡು ದೆಹಲಿಗೆ ಹೋದರೆ, ಇಡೀ ಪಕ್ಷವೇ ಹೋಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇವರು ಕಾಮಿಡಿ ಪೀಸ್‌ಗಳು ಮತ್ತು ಮಾನಸಿಕ ಅಸ್ವಸ್ಥರು ಎಂದು ಟೀಕಿಸಿದರು.
ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಇವರಿಗೆ ಅವಕಾಶವೇ ಸಿಕ್ಕಿಲ್ಲ. ಆದರೆ, ಭೇಟಿ ಮಾಡಿ ದೂರು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಡ್ಡಾ ಅವರನ್ನು ಭೇಟಿ ಮಾಡಿದ್ದರೆ ಫೋಟೊ ಬಿಡುಗಡೆ ಮಾಡಲಿ ಎಂದು ಅವರು ಸವಾಲು ಹಾಕಿದರು.
ಮಿಸ್ಟರ್ ಕುಮಾರ್ ಬಂಗಾರಪ್ಪ ನಿಮ್ಮ ತಂದೆ ಬಿಜೆಪಿಗೆ ಬಂದಾಗ ನೀನು ಬಿಜೆಪಿಗೆ ಬರಲಿಲ್ಲ. ಬಿಜೆಪಿಯ ಸೊರಬ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಮೂಲ ಬಿಜೆಪಿ ಕಾರ್ಯಕರ್ತರನ್ನು ಮರೆತ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಸೋತ ಮೇಲೂ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದೆ. ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವುದಕ್ಕೂ ಅಡ್ಡಗಾಲು ಹಾಕಿದೆ. ಈಗ ನ್ಯಾಷನಲ್ ಲೀಡರ್ ಆಗಲು ಹೊರಟಿದ್ದೀಯಾ ಎಂದು ಕಿಡಿಕಾರಿದರು.
ಈ ನಡುವೆ ಬಿಜೆಪಿ ಹೈಕಮಾಂಡ್ ಪ್ರಸ್ತುತ ದೆಹಲಿ ಚುನಾವಣಾ ಕಾರ್ಯದಲ್ಲಿ ನಿರತವಾಗಿದ್ದು, ದೆಹಲಿಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ರಾಜ್ಯ ಬಿಜೆಪಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಬಿಜೆಪಿ ನಾಯಕರ ಬಣ ಬಡಿದಾಟ ಪಕ್ಷದ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತಿದ್ದು, ಕಾರ್ಯಕರ್ತರು ನಿರಾಶೆಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ನಿಯಂತ್ರಣ ತಪ್ಪುವುದಕ್ಕೂ ಮುನ್ನ ಹೈಕಮಾಂಡ್ ಮಧ್ಯಪ್ರವೇಶಿಸಬೇಕೆಂದೂ ಸಲಹೆ ನೀಡಿದ್ದಾರೆ.
![](https://prajapragathi.com/wp-content/uploads/2025/02/yathnal-vs-vijayendra.gif)