ನವದೆಹಲಿ :
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಗಡಿಪಾರು ಮಾಡಿರುವ ವಿಚಾರದ ಕುರಿತಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಕೇವಲ ಗಡಿಪಾರು ಮಾಡಿದ್ದಷ್ಟೇ ಅಲ್ಲದೆ ಅವರ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳ ಹಾಕಲಾಗಿತ್ತು. ಇದು ಆತಂಕವನ್ನು ಹೆಚ್ಚಿದೆ. 104 ಭಾರತೀಯರನ್ನು ಅಮೆರಿಕ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ.
ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಹಕ್ಕನ್ನು ಅಮೆರಿಕ ಹೊಂದಿದೆ, ಹಾಗೆಯೇ ಅವರ ಗುರುತನ್ನು ಪರಿಶೀಲಿಸಿ ಅವರನ್ನು ಸ್ವೀಕರಿಸಲು ಭಾರತವೂ ಕೂಡ ಸಿದ್ಧವಿದೆ. ಆದರೆ ಅವರನ್ನು ಕಳುಹಿಸಿರುವ ವಿಧಾನಕ್ಕೆ ಟೀಕೆಗಳು ವ್ಯಕ್ತವಾಗಿವೆ. ಅಮೆರಿಕದಿಂದ ಗಡೀಪಾರು ಮಾಡಲಾದ 104 ಅಕ್ರಮ ಭಾರತೀಯ ವಲಸಿಗರು ಬುಧವಾರ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಮಿಲಿಟರಿ ಸಿ -17 ಸಾರಿಗೆ ವಿಮಾನದಲ್ಲಿ ಬಂದಿಳಿದರು.
ಇವರಲ್ಲಿ 30 ಮಂದಿ ಪಂಜಾಬ್‌ನವರು, ತಲಾ 33 ಮಂದಿ ಹರ್ಯಾಣ ಮತ್ತು ಗುಜರಾತ್‌ನವರು, ತಲಾ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ಮತ್ತು ಇಬ್ಬರು ಚಂಡೀಗಢದವರು ಎಂದು ಮೂಲಗಳು ತಿಳಿಸಿವೆ. ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ಬೃಹತ್ ಕ್ರಮಗಳ ಅಡಿಯಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.
ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟ ಅಮೆರಿಕದ ಮಿಲಿಟರಿ ವಿಮಾನವು ಮಧ್ಯಾಹ್ನ 1.55 ರ ಸುಮಾರಿಗೆ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆಡಳಿತವು ಗಡೀಪಾರು ಮಾಡಲ್ಪಟ್ಟವರನ್ನು ಆರಂಭಿಕ ವಿಚಾರಣೆ ನಡೆಸಿ, ಅವರನ್ನು ಅವರವರ ಮನೆಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿತು.
ಗಡಿಪಾರು ಮಾಡಿದವರ ಯಾವುದೇ ಕುಟುಂಬ ಸದಸ್ಯರು ಅವರನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ತಲುಪಲಿಲ್ಲ ಎಂದು ಹೇಳಲಾಗಿದೆ. ಗಡೀಪಾರು ಮಾಡಿದವರನ್ನು ಮನೆಗೆ ಕರೆತರಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿವೆ ಮತ್ತು ಅವರ ಭದ್ರತೆಗಾಗಿ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಹ ಬಸ್‌ನಲ್ಲಿ ನಿಯೋಜಿಸಿವೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಬಂದಿರುವ ಭಾರತೀಯ ವಲಸಿಗರನ್ನು ವಿಮಾನದ ಮೂಲಕ ಅವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜನವರಿ 20 ರಂದು ಅಧ್ಯಕ್ಷರು ಶ್ವೇತಭವನದ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
![](https://prajapragathi.com/wp-content/uploads/2025/02/american-indians.gif)