ಬೆಂಗಳೂರು
ಬೆಂಗಳೂರಿನಲ್ಲಿ ಜೆಪಿ ನಗರದಿಂದ ಹೆಬ್ಬಾಳ ವರೆಗೆ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದ್ದು, ಇದು ಬೆಂಗಳೂರಿನ ಅತಿ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆಯಾಗಿರಲಿದೆ. ಈ ಮೇಲ್ಸೇತುವೆ ಔಟರ್ ರಿಂಗ್ ರೋಡ್ನಲ್ಲಿ ಹಾದುಹೋಗಲಿದ್ದು, 32.15 ಕಿ.ಮೀ ಉದ್ದವಿರಲಿದೆ. ರಾಗಿ ಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಇರುವ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯಲ್ಲಿಯೇ ಇದು ಕೂಡ ಇರಲಿದ್ದು, ಮೆಟ್ರೋ ಲೈನ್ ಕೂಡ ಇರಲಿದೆ.
ಈ ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆಯ ಅಂದಾಜು ವೆಚ್ಚ 9800 ಕೋಟಿ ರೂಪಾಯಿ ಆಗಿದೆ. ಪ್ರಸ್ತಾವಿತ ಯೋಜನೆಗೆ ಸಂಬಂಧಿಸಿ ಪ್ರಗತಿಪರಿಶೀಲನೆಗೆ ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಹೆಬ್ಬಾಳ, ಬಿಇಎಲ್ ರಸ್ತೆ, ಸುಮನಹಳ್ಳಿ ಮತ್ತು ಗೊರಗುಂಟೆಪಾಳ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಸಂಚಾರದಟ್ಟಣೆ ಕಡಿಮೆ ಮಾಡುವುದು ಮತ್ತು ಸುಗಮ ಸಂಚಾರಕ್ಕಾಗಿ ಇಂತಹ ಡಬಲ್ ಡೆಕ್ಕರ್ ಫ್ಲೈ ಓವರ್ ಗಳನ್ನು ನಿರ್ಮಿಸಬೇಕಾದ ಅಗತ್ಯಗಳ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.
40 ಕಿಲೋಮೀಟರ್ಗಳಿಗಿಂತ ಹೆಚ್ಚು ವಿಸ್ತಾರವಾಗಿರುವ ನಮ್ಮ ಮೆಟ್ರೋ ಹಂತ 3 ರ ಭಾಗವಾಗಿರುವ ಈ ಹೊಸ ಕಾರಿಡಾರ್ ಡಬಲ್ ಡೆಕ್ಕರ್ ಫ್ಲೈಓವರ್ ಒಳಗೊಂಡಿರುತ್ತದೆ. ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವು ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಆದರೂ ಎತ್ತರದ ರಸ್ತೆಗಳು ಮತ್ತು ಮೆಟ್ರೋ ಮಾರ್ಗವನ್ನು ಜತೆಯಾಗಿ ನಿರ್ಮಾಣ ಮಾಡಬೇಕಾದ ಅಗತ್ಯವಿರುವುದರಿಂದ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಿದೆ. ಈ ಕಾರಣಕ್ಕೆ ತುಸು ವಿಳಂಬವಾಗುತ್ತಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಕಳೆದ ವರ್ಷದ ಆಗಸ್ಟ್ನಲ್ಲಿ ಯೋಜನೆಗೆ ಅನುಮೋದನೆ ನೀಡಿತ್ತು.
ನಗರದ ದೀರ್ಘಕಾಲೀನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಮ್ಮ ಮೆಟ್ರೋ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
