ನವದೆಹಲಿ:
ಬುಧವಾರ ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಗುರುವಾರ ಪ್ರಮುಖ ಆರು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಗುರುವಾರ ಸಂಜೆ ನಡೆದ ಸಂಪುಟ ಸಭೆಯ ಬಳಿಕ ಸಚಿವರ ಖಾತೆಗಳನ್ನು ಘೋಷಣೆ ಮಾಡಲಾಗಿದೆ. ಪರ್ವೇಶ್ ವರ್ಮಾ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತಾ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ನೀರಾವರಿ ಖಾತೆಯನ್ನು ಪಡೆದುಕೊಂಡಿದ್ದಾರೆ. ಯಮುನಾ ನದಿಯ ಶುದ್ಧೀಕರಣದ ಕಾರ್ಯವನ್ನು ನಿರ್ವಹಿಸುವ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಖಾತೆಯನ್ನು ಸಹ ಹೊಂದಿದ್ದು. ಕಪಿಲ್ ಮಿಶ್ರಾ ಅವರಿಗೆ ಕಾನೂನು ಖಾತೆಯನ್ನು ನೀಡಲಾಗಿದೆ.
ಮುಖ್ಯಮಂತ್ರಿ ಗುಪ್ತಾ ಕನಿಷ್ಠ 10 ಖಾತೆಗಳನ್ನು ನಿರ್ವಹಿಸಲಿದ್ದಾರೆ. ಇನ್ನೂ ಹಂಚಿಕೆಯಾಗದ ಎಲ್ಲಾ ಖಾತೆಗಳು ಮುಖ್ಯಮಂತ್ರಿಯವರ ಬಳಿಯೇ ಇರಲಿದೆ. ಹಣಕಾಸು ಖಾತೆಯೂ ಮುಖ್ಯಮಂತ್ರಿಗಳ ಬಳಿ ಇದ್ದು, ಗೃಹ ಖಾತೆಯನ್ನು ಅವರೇ ಉಳಿಸಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದನ್ನು ಆಶಿಶ್ ಸೂದ್ ವಹಿಸಿಕೊಂಡಿದ್ದಾರೆ. ಸದ್ಯ ರೇಖಾ ಗುಪ್ತ ಕಂದಾಯ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಜಾಗೃತ, ಭೂಮಿ ಮತ್ತು ಕಟ್ಟಡ ನಿರ್ಮಾಣ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷರಾಗಿರುವ ಆಶಿಶ್ ಸೂದ್ ಮೇಲೆ ಎರಡು ದೊಡ್ಡ ಖಾತೆಗಳ ಜವಾಬ್ದಾರಿ ಇದೆ. ಅವರು ಶಿಕ್ಷಣ ಮತ್ತು ವಿದ್ಯುತ್ ಇಲಾಖೆ ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದಾರೆ. ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದಾಗ ಉಚಿತ ವಿದ್ಯುತ್ ಹಾಗೂ ಶಿಕ್ಷಣ ನೀಡಿತ್ತು. ಇದೀಗ ಬಿಜೆಪಿ ಸರ್ಕಾರ ಅದನ್ನು ಮುಂದುವರಿಸುತ್ತಾ? ಇಲ್ಲವಾ ಎಂದು ಕಾದು ನೋಡಬೇಕು.
ಬಿಜೆಪಿ ಸಿಖ್ ನಾಯಕನಾಗಿರುವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಆಹಾರ ಮತ್ತು ಸರಬರಾಜು, ಅರಣ್ಯ ಮತ್ತು ಪರಿಸರ ಹಾಗೂ ಕೈಗಾರಿಕಾ ಖಾತೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಕೈಗಾರಿಕೆಗಳ ಸಚಿವರಾಗಿ, ಯಮುನಾ ನದಿ ಶುದ್ಧೀಕರಣ ಅವರ ಪಾತ್ರ ಬಹಳ ಮುಖ್ಯವಾಗಲಿದೆ.
ಈ ಹಿಂದೆ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಮೊದಲು ಸಚಿವರಾಗಿ, ನಂತರ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕಪಿಲ್ ಮಿಶ್ರಾ ಈಗ ದೆಹಲಿ ಸಂಪುಟಕ್ಕೆ ಮರಳಿದ್ದಾರೆ. ಕಾನೂನು ಮತ್ತು ನ್ಯಾಯ ಇಲಾಖೆಯ ಜೊತೆಗೆ, ಅವರು ಕಾರ್ಮಿಕ, ಕಲೆ ಮತ್ತು ಸಂಸ್ಕೃತಿ, ಭಾಷೆ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ನಿರ್ವಹಿಸಲಿದ್ದಾರೆ.ರವೀಂದರ್ ಸಿಂಗ್ ಅವರಿಗೆ ಸಮಾಜ ಕಲ್ಯಾಣ, ಎಸ್ಸಿ ಮತ್ತು ಎಸ್ಟಿ ಕಲ್ಯಾಣ, ಸಹಕಾರಿ ಮತ್ತು ಚುನಾವಣಾ ಖಾತೆಗಳ ಉಸ್ತುವಾರಿ ನೀಡಲಾಗಿದೆ.
