ಬೆಳಗಾವಿ:
ಕನ್ನಡಿಗರನ್ನು ಕೆಣಕಿದವರನ್ನು ಸುಮ್ಮನೇ ಬಿಡುವುದಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಬೆಳಗಾವಿಯಲ್ಲಿ ಸಂಪೂರ್ಣ ನಾಶವಾಗಿದೆ. ಯಾರೂ ದಿಕ್ಕಿಲ್ಲ. ಆ ಹೊಟ್ಟೆಕಿಚ್ಚಿನಿಂದ ಈ ರೀತಿ ಹಲ್ಲೆ, ದಾಳಿಗಳನ್ನು ಮುಂದುವರಿಸಿದ್ದಾರೆ.
ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ, ರಾತ್ರೋರಾತ್ರಿ ಅದನ್ನು ಮಾಡಿದ್ದು ಯಾರು? ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಕೇಸನ್ನು ದಾಖಲು ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬಿಗಿಯಬೇಕು, ಅದ್ಹೇಗೆ ಅವನು ಪೋಕ್ಸೋ ಕೇಸನ್ನು ದಾಖಲಿಸುತ್ತಾನೆ? ಅವನೇನು ಕನ್ನಡಿಗನೋ ಅಥವಾ ಮಹಾರಾಷ್ಟ್ರದವನೋ? ಪೊಲೀಸ್ ಕಮೀಷನರ್ ಕೂಡಲೇ ಕಂಡಕ್ಟರ್ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತು ಗೃಹ ಸಚಿವರು ತಮ್ಮ ರಾಜಕೀಯ ದೊಂಬರಾಟವನ್ನು ಪಕ್ಕಕ್ಕಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಬೇಕು ಅಮಾಯಕ ಬಸ್ ಚಾಲಕ, ನಿರ್ವಾಹಕರನ್ನು ಹೊಡೆಯುತ್ತಾರೆ.
ಅಲ್ಲದೇ ಅವರ ಮುಖಕ್ಕೆ ಮಸಿ ಬಳಿದು ಬೆದರಿಕೆ ಹಾಕಿ ಜೈ ಮಹಾರಾಷ್ಟ್ರ ಎಂದು ಹೇಳಿಸಿದ್ದಾರೆ. ಇದು ಭಯೋತ್ಪಾದಕರು ಮಾಡುವಂಥ ಕೃತ್ಯ, ಕ್ರಿಯೆಗೆ ಪ್ರತಿಕ್ರಿಯೆ ನೀಡಿಯೇ ತೀರುತ್ತೇವೆ, ಪಾಕಿಸ್ತಾನದ ಭಯೋತ್ಪಾದಕರಿಗೂ ಎಂಇಎಸ್ ಹಾಗೂ ಶಿವಸೇನೆಯ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿಲ್ಲ. ಇವರ ವರ್ತನೆಗಳು ಅಷ್ಟು ಕ್ರೂರವಾಗಿವೆ ಎಂದರು.
