ಕಬಡ್ಡಿ ತಾರೆ ದೀಪಕ್​-ಬಾಕ್ಸರ್​ ಸವೀಟಿ ದಾಂಪತ್ಯದಲ್ಲಿ ಬಿರುಕು

ನವದೆಹಲಿ:

    ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀಟಿ ಬೂರಾ, ತಮ್ಮ ಪತಿಯಾದ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್​ ಹೂಡಾ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಆರೋಪ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಫಾರ್ಚೂನರ್​ ಕಾರು ಮತ್ತು ಒಂದು ಕೋಟಿ ರೂ. ವರದಣೆ ನೀಡಬೇಕೆಂದು ಹೂಡಾ ಪ್ರತಿನಿತ್ಯ ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ ಪ್ರಕರಣ ಸಂಬಂಧ ಹರಿಯಾಣದ ಹಿಸಾರ್‌ ಠಾಣೆಯಲ್ಲಿ ಹೂಡಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೀಪಕ್​ ಕೂಡ ತನ್ನ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಮತ್ತು ಮೋಸದ ಆರೋಪ ಮಾಡಿದ್ದಾರೆ.

    ಬಾಕ್ಸಿಂಗ್​ ತ್ಯಜಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಜತೆಗೆ ವರದಣೆಗಾಗಿ ಪತಿ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ನಡೆದ ಗಲಾಟೆಯ ಬಳಿಕ ತನ್ನನ್ನು ಗಂಡನ ಮನೆಯಿಂದ ಹೊರಹಾಕಲಾಗಿದೆ 32 ವರ್ಷದ ಸವೀಟಿ ಬೋರಾ ಹರಿಯಾಣದ ಹಿಸಾರ್​ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ದೀಪಕ್​ ಹೂಡಾ ರೋಹ್ಟಕ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಮಾವನ ಮನೆಯವರು ತನಗೆ 25 ಲಕ್ಷ ರೂ. ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

   ದೀಪಕ್ ಹೂಡಾ ವಿರುದ್ಧ ಸವೀಟಿ ಬೂರಾ ನೀಡಿದ ದೂರಿನ ಆಧಾರದ ಮೇಲೆ ಫೆಬ್ರವರಿ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಹೂಡಾಗೆ 2-3 ಬಾರಿ ನೋಟಿಸ್ ನೀಡಿಲಾಗಿದ್ದರೂ ಅವರು ಹಾಜರಾಗಲಿಲ್ಲ ಎಂದು ಸೀಮಾ ಇದೇ ವೇಳೆ ಹೇಳಿದರು.

   ಹೂಡಾ ಅವರನ್ನು ಸಂಪರ್ಕಿಸಿದಾಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ನಾನು ಪೊಲೀಸರಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ. ನಾನು ಖಂಡಿತವಾಗಿಯೂ ಪೊಲೀಸ್ ಠಾಣೆಗೆ ಹೋಗುತ್ತೇನೆ. ಆದರೆ ಪತ್ನಿ ವಿರುದ್ಧ ನಕಾರಾತ್ಮಕ ಕಾಮೆಂಟ್ ಮಾಡುವುದಿಲ್ಲ ಎಂದು ಹೂಡಾ ಹೇಳಿದ್ದಾರೆ.

   ಹೂಡಾ ಅವರು 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕುಟುಂಬ ಮೂಲಗಳ ಪ್ರಕಾರ ವಿಚ್ಛೇದನ ಪಡೆಯಲು ಸವೀಟಿ ಮತ್ತು ದೀಪಕ್​ ಇಬ್ಬರೂ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link