ನವದೆಹಲಿ:
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಜೋಸ್ ಬಟ್ಲರ್ ಅವರು ಇಂಗ್ಲೆಂಡ್ ಒಡಿಐ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಆಂಗ್ಲರ ಏಕದಿನ ತಂಡಕ್ಕೆ ನಾಯಕನನ್ನು ನೇಮಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕಸರತ್ತು ನಡೆಸುತ್ತಿದೆ.
2027 ರ ಐಸಿಸಿ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸೂಕ್ತ ನಾಯಕನನ್ನು ಆಯ್ಕೆ ಮಾಡಲು ವಿವಿಧ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ನಡುವೆ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರು ಇಂಗ್ಲೆಂಡ್ ಏಕದಿನ ತಂಡದ ನಾಯಕನ ರೇಸ್ನಲ್ಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿರುವ ಬೆನ್ ಸ್ಟೋಕ್ಸ್ ಅವರನ್ನು 50 ಓವರ್ಗಳ ತಂಡಕ್ಕೆ ನಾಯಕನನ್ನಾಗಿ ನೇಮಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಸಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ.
ಇಎಸ್ಪಿಎನ್ ಕ್ರಿಕ್ಇನ್ಪೋ ಸಂವಾದಲ್ಲಿ ಮಾತನಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ರಾಬ್ ಕೀ, ಇಂಗ್ಲೆಂಡ್ ವೈಟ್ಬಾಲ್ ತಂಡಕ್ಕೆ ನಾಯಕನಾಗಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಈಗಾಗಲೇ ಅವರು ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಅವರು ಅತ್ಯುತ್ತಮ ನಾಯಕರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಸೀಮಿತ ಓವರ್ಗಳ ತಂಡಕ್ಕೆ ಬೆನ್ ಸ್ಟೋಕ್ಸ್ ಅವರನ್ನು ಪರಿಗಣಿಸಿಲ್ಲವಾದರೆ, ಅದು ದಡ್ಡತನದಿಂದ ಕೂಡಿರುತ್ತದೆ ಎಂದು ಅವರು ಹೇಳಿದ್ದಾರೆ.
“ನಾಯಕತ್ವದ ಆಯ್ಕೆಗಳಲ್ಲಿ ನಾವು ಯಾವುದನ್ನೂ ಕಡೆಗಣಿಸುವಂತಿಲ್ಲ. ನೀವು ಪ್ರತಿಯೊಂದು ಆಯ್ಕೆಯನ್ನು ಪರಿಗಣಿಸಬೇಕಾಗುತ್ತದೆ. ಯಾವುದು ಅತ್ಯುತ್ತಮವಾದದ್ದು ಎಂಬುದನ್ನು ನೀವು ನೋಡಬೇಕಾಗುತ್ತದೆ. ಅದು ಯಾವ ರೀತಿಯ ಪ್ರಭಾವವನ್ನು ತಂಡದ ಮೇಲೆ ಬೀರಬಹುದೆಂದು ನಾವು ಯೋಚಿಸಬೇಕಾಗುತ್ತದೆ. ನಾನು ನೋಡಿದ ಅತ್ಯುತ್ತಮ ನಾಯಕರಲ್ಲಿ ಬೆನ್ ಸ್ಟೋಕ್ಸ್ ಕೂಡ ಉತ್ತಮರು. ಹಾಗಾಗಿ ಅವರನ್ನು ನಾವು ನೋಡಿಲ್ಲವಾದರೆ ಅದು ದಡ್ಡತನದಿಂದ ಕೂಡಿರುತ್ತದೆ. ಹಾಗಾಗಿ ನಾವು ಎಲ್ಲಾ ಆಯ್ಕೆಯನ್ನು ನೋಡುತ್ತೇವೆ ಹಾಗೂ ಪರಿಗಣಿಸುತ್ತೇವೆ,” ಎಂದು ರಾಬ್ ಕೀ ತಿಳಿಸಿದ್ದಾರೆ.
