ಭೋಪಾಲ್
ಅಪ್ರಾಪ್ತ ವಯಸ್ಸಿನ ಬಾಲಕಿಯರ ಬಲವಂತದ ಮತಾಂತರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರಕ್ಕೆ ಹೇಗೆ ಮರಣದಂಡನೆ ಶಿಕ್ಷೆಯ ಕಾನೂನು ಇರುವಂತೆಯೇ ಬಲವಂತದ ಧಾರ್ಮಿಕ ಮತಾಂತರಕ್ಕೂ ಮರಣದಂಡನೆ ವಿಧಿಸುವುದಾಗಿ ಅವರು ಘೋಷಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭೋಪಾಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಪ್ರತಿಪಕ್ಷ ಕಾಂಗ್ರೆಸ್ನಿಂದ ಆಕ್ಷೇಪವೂ ವ್ಯಕ್ತವಾಗಿದೆ. ಮುಗ್ಧ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರ ವಿರುದ್ಧ ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದೆ. ಅಂತಹವರಿಗೆ ಮುಂದೆ ಮರಣದಂಡನೆ ವಿಧಿಸಲಾಗುತ್ತದೆ. ಬಲವಂತದ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸಿ ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು. ಕಾನೂನುಬಾಹಿರ ಮತಾಂತರದಲ್ಲಿ ತೊಡಗುವವರನ್ನು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಬಲವಂತದ ಧಾರ್ಮಿಕ ಮತಾಂತರದ ತಪ್ಪುಗಳು ಮತ್ತು ಅಂತಹ ದುಷ್ಕೃತ್ಯಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಎದುರಿಸಲಿದೆ ಎಂದು ಮೋಹನ್ ಯಾದವ್ ಫೇಸ್‌ಬುಕ್ ಪೋಸ್ಟ್‌ನಲ್ಲಿಯೂ ತಿಳಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ಹೆಣ್ಣು ಮಕ್ಕಳ ಸ್ವಾಭಿಮಾನ ಮತ್ತು ರಕ್ಷಣೆಗೆ ಸಮರ್ಪಿತವಾಗಿದೆ ಎಂದು ಅವರು ಹೇಳಿದ್ದಾರೆ.
ಭೋಪಾಲ್‌ನಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆಯಾದ ‘ಲಾಡ್ಲಿ ಬೆಹ್ನಾ ಯೋಜನೆ’ಯ 1.27 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗಳಿಗೆ 1,552.73 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದರು.
