ದುಬೈ
ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗೆ ಚಾಂಪಿಯನ್ ಪಟ್ಟಕ್ಕೇರಿದ ಟೀಮ್ ಇಂಡಿಯಾಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಎಂಬುದು ವಿಶೇಷ. ಆದರೆ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಯಾವುದೇ ಅಧಿಕಾರಿ ಸಮಾರೋಪ ಸಮಾರಂಭದ ವೇಳೆ ಕಾಣಿಸಿಕೊಂಡಿಲ್ಲ ಎಂಬುದೇ ಅಚ್ಚರಿ.
ಸಾಮಾನ್ಯವಾಗಿ ಐಸಿಸಿ ಟೂರ್ನಿಯ ಅಂತಿಮ ಪಂದ್ಯದ ವೇಳೆ ಆಯೋಜಕ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಅಧ್ಯಕ್ಷರು ಕಾಣಿಸಿಕೊಳ್ಳುವುದು ವಾಡಿಕೆ. ಇದಾಗ್ಯೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆಯೋಜಕರಾದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಆಗಲಿ, ಇತರೆ ಸದಸ್ಯರಾಗಲಿ ಕಾಣಿಸಿಕೊಂಡಿಲ್ಲ. ಇದುವೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಿದರೂ ಫೈನಲ್ ಪಂದ್ಯ ನಡೆದಿದ್ದು ದುಬೈನಲ್ಲಿ ಎಂಬುದು ವಿಶೇಷ. ಅಂದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದಿರುವ ಕಾರಣ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
